ನಮ್ಮ ಬಳಿ ಇರುವ ಈ ಕಲ್ಲು ದೇವರು
ಗಳೆಲ್ಲ ದೇವರಾಗಲು ಹೆಣಗಿದವರು
ದೇವರಾದ ಮೇಲೆ ತಲೆಯ ಮೇಲೊಂದು
ಸೂರೂ ಇಲ್ಲದೆ ಬಿರು ಬಿಸಿಲಲಿ ಒಣಗಿದವರು
ಜನರ ಹುಚ್ಚಾಟಕೆ ಮರುಳಾಗಿ ತಲೆ ಬಾಗಿ
ಅವರು ಹೇಳಿದುದಕೆಲ್ಲ ‘ಹೂಂ’ಗುಟ್ಟಿದವರು
ಈಗ ಅವರೆದೆಯಲಿ ಇರಲು ಜಾಗವಿಲ್ಲದೆ
ಈ ಜಗುಲಿಯನೇರಿದ ಉಸಿರುಗಟ್ಟಿದವರು
ಕಾಟ ತಪ್ಪಿಸಿದ ವಿಘ್ನ ಓಡಿಸಿದ ಜಗವ
ಹೊತ್ತು ಜನರಿಗೆ ಸಂತೃಪ್ತಿ ತಂದವರಿವರು
ಸುಖ ನೆತ್ತಿಗೇರಿದವರಿಗೆ ಕಂಡರೂ ಕಾಣದ
ಮಣ್ಣು ಮುಕ್ಕಿದವರಿಗೆ ಮಾತ್ರ ದೇವರಿವರು
ದೇವರುಗಳನೇ ಬೀದಿಪಾಲು ಮಾಡಿದವರ
ನಡುವೆ ಬರೀ ‘ಕೋತಿ ಮುಂಡೇವು’ ನಾವು!
ದೇವರಾಗುವ ದಿವ್ಯ ಕನಸನು ಅವರಿಗೇ ಬಿಟ್ಟು
ಮರದ ಪೊಟರೆಯಲೇ ಬದುಕಿ ಕಾಣೋಣ ಸಾವು!!
✍ನೀ.ಶ್ರೀಶೈಲ ಹುಲ್ಲೂರು