Wednesday, October 18, 2023

ಕೌಶಲ್ಯ ವರ್ಧನೆಯೊಂದಿಗೆ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಿ -ಡಾ.ಯಶಸ್ವಿನಿ ಡಿ.

Must read

ಬಂಟ್ವಾಳ: ಬದಲಾಗುತ್ತಿರುವ ಶೈಕ್ಷಣಿಕ ಕಾಲಘಟ್ಟದಲ್ಲಿ ಜೀವನದ ರೀತಿ, ನೀತಿ – ನಿರೂಪಣೆ ಹಾಗೂ ಮಾನವೀಯ ಬಂಧಾನುಬಂಧಗಳ ಮೌಲ್ಯಗಳೂ ಸಹಾ ಬದಲಾವಣೆಗೊಳಪಡುತ್ತಿದ್ದು, ಕೌಶಲ್ಯ ವರ್ಧನೆಯಿಂದ ಮಾತ್ರವೇ ಮಾನವ ಸಂಪನ್ಮೂಲದ ನೈಜ ಅಭಿವೃದ್ದಿಯ ಕನಸು ನನಸಾಗಲು ಸಾಧ್ಯ. ವಿದ್ಯಾರ್ಥಿ ಸಾಮಾಜಿಕ ಕಾರ್ಯಕರ್ತರು ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಸಂಪರ್ಕದಾತರಾಗುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನದ ಅವಶ್ಯಕತೆಯಿದೆ. ಕೌಶಲ್ಯಾಭಿವೃದ್ಧಿಯೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡಾಗ ಮಾತ್ರ ಸುಸ್ಥಿರ ಸಮಾಜದಅಭಿವೃದ್ಧಿ ಸಾಧ್ಯವೆಂದು ಮಂಗಳೂರು ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಯಶಸ್ವಿನಿ ಡಿ. ಹೇಳಿದರು.
ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ಸಮಾಜ ಕಾರ್ಯ ವಿಭಾಗದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲ್ಪಟ್ಟ ಒಂದು ದಿನದ ರಾಜ್ಯ ಮಟ್ಟದ ಕೌಶಲ್ಯ ಪ್ರವರ್ಧನೆ ಕಾರ್ಯಾಗಾರದ ದಿಕ್ಸೂಚಿ ಭಾಷಣ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಹರಿಪ್ರಸಾದ್ ಬಿ. ಶೆಟ್ಟಿ ವಹಿಸಿ ಮಾತನಾಡಿ,  ಸಮಗ್ರತೆಯಿಂದೊಡಗೂಡಿದ ಮಾನವ ಸಂಪನ್ಮೂಲ ಅಭಿವೃದ್ಧಿಯು ಇಂದಿನ ಸ್ಪರ್ಧಾತ್ಮಕ ಜಗತ್ತಿನ ಅಗತ್ಯತೆಯೂ- ಅನಿವಾರ್ಯತೆಯಾಗಿದ್ದು, ಶಿಕ್ಷಣದೊಂದಿಗೆ ಕೌಶಲ್ಯ ಪ್ರವರ್ಧನೆಯೇ ಔದ್ಯೋಗಿಕ ಮಾರುಕಟ್ಟೆಯಲ್ಲಿ ಯಶಸ್ಸು ಗಳಿಸುವ ಮಾರ್ಗಸೂಚಿಯಾಗಿದೆ ಎಂದರು.
ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಯೋಜಕ  ಡಾ.ರವಿ. ಎಂ.ಎನ್‌. ಮತ್ತು ಕಾರ್ಯಾಗಾರದ ಸಂಯೋಜಕಿ ಡಾ.ಮೇರಿ.ಎಂ.ಜೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರುಗಳಾದ ಪ್ರೊ.ಉದಯಕುಮಾರ್ ಸಿ. ಆರ್., ಪ್ರೊ. ಚಂದ್ರ ಎಸ್., ಪ್ರೊ. ಅಶೋಕ ಕುಮಾರ ಬಾವಿಕಟ್ಟಿ ಮತ್ತು ರಶ್ಮಿ ಕುಮಾರಿ ಕಾರ್ಯಾಗಾರವನ್ನು ಸಂಯೋಜಿಸಿದರು.
ಈ ಕಾರ್ಯಾಗಾರದಲ್ಲಿ ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜ್ ನ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.ಪ್ರಸನ್ನಕುಮಾರ್ ಸಿ., ಜೀವನ ಕೌಶಲ್ಯಾಭಿವೃದ್ಧಿಯ ಅಗತ್ಯತೆಯ ಬಗ್ಗೆ ಮಾತನಾಡಿದರು. ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜ್ ನ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ನಂದೀಶ್ ವೈ.ಡಿ., ಸಮಾಜಕಾರ್ಯ ವೃತ್ತಿಪರತೆ, ಅವಕಾಶಗಳು ಮತ್ತು ಸವಾಲುಗಳು ಕುರಿತಂತೆ ವಿಚಾರ ಮಂಡಿಸಿದರು.
ಸಮಾಜಕಾರ್ಯ ವಿದ್ಯಾರ್ಥಿನಿಯರಾದ ಪ್ರಮೀಳಾ ಮತ್ತು ಬಳಗದವರು ಪ್ರಾರ್ಥಿಸಿ, ವಾಣಿಶ್ರೀ ಸ್ವಾಗತಿಸಿ, ರಕ್ಷಿತಾ ವಂದಿಸಿದರು.  ಸುಮಾ ಕಾರ್ಯಕ್ರಮ ನಿರೂಪಿಸಿದರು. ಮಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯ ವಿವಿಧ ಕಾಲೇಜುಗಳ 100ಕ್ಕೂ ಹೆಚ್ಚು ವಿದ್ಯಾರ್ಥಿ ಪ್ರತಿನಿಧಿಗಳು ಕಾರ್ಯಾಗಾರದ ಪ್ರಯೋಜನ ಪಡೆದರು.

More articles

Latest article