ಬಂಟ್ವಾಳ : ಕಲಿತ ವಿದ್ಯೆಗಳು ಜೀವನದಲ್ಲಿ ಪಾಲನೆಯಾದಾಗ ಮಾತ್ರ ವಿದ್ಯಾರ್ಜನೆ ಸಾರ್ಥಕವಾಗುತ್ತದೆ ಎಂದು ಕುಟ್ಯಾಡಿಯ ಸಿರಾಜುಲ್ ಹುದಾ ಸಂಸ್ಥೆಯ ಪ್ರಾಂಶುಪಾಲ ಮೌಲಾನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಹೇಳಿದರು.
ಮಿತ್ತೂರು ಕೆಜಿಎನ್ ಕ್ಯಾಂಪಸ್ ನಲ್ಲಿ ಭಾನುವಾರ ರಾತ್ರಿ ನಡೆದ ಮಾಣಿಯ ದಾರುಲ್ ಇರ್ಶಾದ್ ಎಜುಕೇಶನಲ್ ಸೆಂಟರ್ ನ 30ನೇ ವಾರ್ಷಿಕ ಮಹಾ ಸಮ್ಮೇಳನ, 3ನೇ ಸನದುದಾನ ಹಾಗೂ ಅಜ್ಮೀರ್ ಮೌಲಿದ್ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮುಖ್ಯಪ್ರಭಾಷಣ ಗೈದ ಅವರು, ವಿದ್ಯಾರ್ಥಿಗಳು ನಿಷ್ಕಳಂಕರಾಗಿ ವಿದ್ಯಾರ್ಜನೆ ನಡೆಸುವ ಮೂಲಕ ಗುರಿ ಸಾಧಿಸಬೇಕು ಎಂದರು.
ಇಸ್ಲಾಮ್ ಧರ್ಮವು ಕೋಮುವಾದವನ್ನು ಪ್ರಚೋದಿಸುವುದಿಲ್ಲ, ಪ್ರವಾದಿ(ಸ), ಎರಡನೇ ಖಲಿಫ ಉಮರ್(ರ) ಸಹಿತ ಎಲ್ಲಾ ಮುಸ್ಲಿಮ್ ಆಡಳಿತದಲ್ಲಿ ಸರ್ವಧರ್ಮಿಯರಿಗೂ ಬದುಕುವ ಹಕ್ಕನ್ನು ನೀಡಲಾಗಿತ್ತು. ಆಧುನಿಕ ಇಸ್ಲಾಮಿಕ್ ರಾಷ್ಟ್ರಗಳಲ್ಲೂ ಮುಸ್ಲಿಮೇತರರಿಗೂ ಬದುಕುವ, ಉದ್ಯೋಗ, ಉದ್ದಿಮೆ ಹೊಂದುವ ಹಕ್ಕುಗಳನ್ನು ನೀಡಲಾಗುತ್ತಿದೆ.
ಯಾವುದೇ ಸಂದರ್ಭದಲ್ಲೂ ಉದ್ವೇಗಕ್ಕೊಳಗಾಗದೇ ವಿವೇಕಯುತವಾಗಿ ವರ್ತಿಸಬೇಕು. ಪ್ರಚೋದನಕಾರಿ ಘೋಷಣೆ, ಭಾಷಣಗಳನ್ನು ಧಾರ್ಮಿಕ ವಿದ್ವಾಂಸರು ಹಾಗೂ ಜನಸಾಮಾನ್ಯರು ಮಾಡಬಾರದು ಎಂದವರು ಸಲಹೆ ನೀಡಿದರು.
ಮಾಣಿ ದಾರುಲ್ ಇರ್ಶಾದ್ ಸಂಸ್ಥೆಯ ಅಧ್ಯಕ್ಷ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ಕೂರತ್ ದುವಾ ನೆರವೇರಿಸಿದರು. ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಸಮ್ಮೇಳನ ಉದ್ಘಾಟಿಸಿದರು. ಸಮಸ್ತ ಮುಷಾವರ ಸದಸ್ಯ ಳಿಯಾಉಲ್ ಮುಸ್ತಫಾ ಹಾಮಿದ್ ತಂಙಳ್ ಮಾಟೂಲ್ ಸನದುದಾನ ನೆರವೇರಿಸಿದರು. ವೇದಿಕೆಯಲ್ಲಿ ಕರ್ನಾಟಕ ಸುನ್ನಿ ಕೋ ಆರ್ಡಿನೇಷನ್ ಮುಖಂಡ ಎಸ್ ಪಿ ಸಖಾಫಿ, ಅಬೂಸುಫ್ಯಾನ್ ಮದನಿ, ಜಿಎಂ ಕಾಮಿಲ್‌ಸಖಾಫಿ, ಮಿತ್ತೂರು ಕೆ.ಜಿ.ಎನ್ ಪ್ರಾಂಶುಪಾಲ ಸ್ವಲಾಹುದ್ದೀನ್ ಜಮಲುಲೈಲಿ ಅಲ್ ಮದನಿ, ಇಸ್ಮಾಯಿಲ್ ಮುಸ್ಲಿಯಾರ್ ಮಿತ್ತೂರು, ಮಾಣಿ ದಾರುಲ್ ಇರ್ಷಾದ್ ಉಪಾಧ್ಯಕ್ಷ ಇಬ್ರಾಹಿಂ ಫೈಝಿ ಕನ್ಯಾನ ಉಪಸ್ಥಿತರಿದ್ದರು.
ಮಾಣಿ ದಾರುಲ್ ಇರ್ಷಾದ್ ನ ಮ್ಯಾನೇಜಿಂಗ್ ಡೈರೆಕ್ಟರ್ ಮಹಮ್ಮದ್ ಶರೀಫ್ ಸಖಾಫಿ ಮಾಣಿ ಸ್ವಾಗತಿಸಿದರು. ಮಿತ್ತೂರು ಕೆ.ಜಿ.ಎನ್. ಮುದರ್ರಿಸ್ ಹುಸೈನ್ ಮುಈನಿ ಮಾರ್ನಾಡ್ ವಂದಿಸಿದರು.