ಬಂಟ್ವಾಳ: ಒಡ್ಡೂರು ಫಾರ್ಮ್ಹೌಸ್‌ನಲ್ಲಿ ಫೆ. 24ರಿಂದ ಪ್ರಾರಂಭಗೊಂಡಿದ್ದ ನೂತನ ಒಡ್ಡೂರು ಧರ್ಮಚಾವಡಿಯಲ್ಲಿ ಶ್ರೀ ಕೊಡಮಣಿತ್ತಾಯ ಧರ್ಮದೈವದ ಪ್ರತಿಷ್ಠೆ, ಶತಚಂಡಿಕಾಯಾಗ ಹಾಗೂ ಧರ್ಮನೇಮೋತ್ಸವದ ಧಾರ್ಮಿಕ, ವೈದಿಕ ವಿಧಿ ವಿಧಾನಗಳು ಫೆ.29ರ ರಾತ್ರಿ ಜರಗಿದ ಧರ್ಮನೇಮೋತ್ಸವದೊಂದಿಗೆ ಸಂಪನ್ನಗೊಂಡಿತು.
ಧರ್ಮನೇಮೋತ್ಸವದಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಕಟೀಲು ಕ್ಷೇತ್ರದ ಅನಂತಪದ್ಮನಾಭ ಆಸ್ರಣ್ಣ, ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲು, ಪುತ್ತೂರು ಶಾಸಕ ಸಂಜೀವ ಮಠಂದೂರು, ಉಡುಪಿ ಶಾಸಕ ರಘುಪತಿ ಭಟ್, ಕಾರ್ಕಳ ಶಾಸಕ ಸುನೀಲ್‌ಕುಮಾರ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಂಗಳೂರು ಉತ್ತರ ಶಾಸಕ ಡಾ| ವೈ.ಭರತ್ ಶೆಟ್ಟಿ, ಮಾಜಿ ಸಚಿವರಾದ ಬಿ.ನಾಗರಾಜ ಶೆಟ್ಟಿ, ಕೆ.ಅಭಯಚಂದ್ರ ಜೈನ್, ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದ್ರೆ ಮೊದಲಾದ ಗಣ್ಯರು ಭಾಗವಹಿಸಿದ್ದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹಾಗೂ ಉಳಿಪ್ಪಾಡಿಗುತ್ತು ಕುಟುಂಬಸ್ಥರು ಆಗಮಿಸಿದ ಗಣ್ಯರು, ಭಕ್ತಾಧಿ ಗಳನ್ನು ಸ್ವಾಗತಿಸಿ ಸತ್ಕರಿಸಿದರು. ಫೆ. 29ರ ಮಧ್ಯಾಹ್ನ ನಡೆದ ಶತಚಂಡಿಕಾಯಾಗ, ಧರ್ಮನೇಮೋತ್ಸವದಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡಿದ್ದರು. ಆಗಮಿಸಿದ ಎಲ್ಲರಿಗೂ ಊಟೋಪಚಾರದ ವ್ಯವಸ್ಥೆ ಕೈಗೊಳ್ಳಲಾಗಿತ್ತು.
ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಸಚಿರುಚಿಯನ್ನು ಅನುಭವಿಸಿದರು. ಬಿ.ಸಿ.ರೋಡಿನಿಂದ ಉಚಿತ ಬಸ್ಸಿನ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಹೆಚ್ಚಿನ ಮಂದಿ ಅದರ ಪ್ರಯೋಜನವನ್ನೂ ಪಡೆದುಕೊಂಡರು. ಸಾವಿರಾರು ಸ್ವಯಂಸೇವಕರು ಎಲ್ಲಾ ಕಾರ್ಯಕ್ರಮಗಳ ಯಶಸ್ಸಿನಲ್ಲಿ ಶ್ರಮಿಸಿರುವುದು ವಿಶೇಷವಾಗಿತ್ತು.