ಬಂಟ್ವಾಳ: ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘ ಬಂಟ್ವಾಳ ಸಹಯೋಗದೊಂದಿಗೆ ವಿಶ್ವ ಸಾಮಾಜಿಕ ನ್ಯಾಯ ದಿನವನ್ನು ಗುರುವಾರ ಬಿ.ಸಿ.ರೋಡಿನಲ್ಲಿರುವ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಆಚರಿಸಲಾಯಿತು.
ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ, ಹಿರಿಯ ಸಿವಿಲ್ ನ್ಯಾಯಾಧೀಶ ಮಹಮ್ಮದ್ ಇಮ್ತಿಯಾಜ್ ಅಹಮದ್ ಅವರು ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಬದುಕುವ ಹಕ್ಕು ಇದ್ದು, ಸಾಮಾಜಿಕ ನ್ಯಾಯವೂ ದೊರಕುವಂತಾಗಬೇಕು. ನಾವು ಸಂವಿಧಾನಕ್ಕೆ ಗೌರವ ಕೊಟ್ಟಾಗಲೇ ನೆಮ್ಮದಿಯ ಜೀವನ ಸಾಧ್ಯ ಎಂದರು.
ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಶಿಲ್ಪಾ ಜಿ.ತಿಮ್ಮಾಪುರ್, ಜಿಲ್ಲಾ ಕಾನೂನು ಸಮಿತಿಯ ಸೇವೆಗಳ ಪ್ರಾಧೀಕಾರದ ಸದಸ್ಯ ಕೆ.ರಮೇಶ್ ಉಪಾಧ್ಯಾಯ, ಸಹಾಯಕ ಸರಕಾರಿ ಅಭಿಯೋಜಕ ಶೌಕತ್ ಆಲಿ ಭಾಗವಹಿಸಿದ್ದರು.
ಸಂಪನ್ಮೂಲ ವ್ಯಕ್ತಿ ನ್ಯಾಯವಾದಿ ಶಿವಪ್ರಕಾಶ್ ಉಪನ್ಯಾಸ ನೀಡಿದರು. ನ್ಯಾಯವಾದಿ ರವೀಂದ್ರ ಕುಕ್ಕಾಜೆ ಸ್ವಾಗತಿಸಿದರು. ನ್ಯಾಯವಾದಿ ನರೇಂದ್ರನಾಥ್ ಭಂಡಾರಿ ವಂದಿಸಿದರು.