ವಿಟ್ಲ: ವಿಟ್ಲದ ಯಕ್ಷ ಸಿಂಧೂರ ಪ್ರತಿಷ್ಠಾನದ ವತಿಯಿಂದ ಪ್ರತಿ ವರ್ಷ ನೀಡಲಾಗುವ ‘ಯಕ್ಷಸಿಂಧೂರ ಪ್ರಶಸ್ತಿ’ಯನ್ನು ಈ ವರ್ಷ ಹಿರಿಯ ಯಕ್ಷಗುರು ಪಿ. ದೂಮಣ್ಣ ಶೆಟ್ಟಿಯವರಿಗೆ ವಿಟ್ಲದ ಶ್ರೀ ಭಗವತೀ ದೇವಸ್ಥಾನದ ಜಾತ್ರೋತ್ಸವ ಸಂದರ್ಭದಲ್ಲಿ ನೀಡಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಯಕ್ಷಗಾನ ವಿದ್ವಾಂಸ ಡಾ. ಪ್ರಭಾಕರ ಶಿಶಿಲ ಮಾತನಾಡಿ ‘ಜಾತಿ, ಗಡಿ, ಮತ ಧರ್ಮವನ್ನು ಮೀರಿದ ಶ್ರೇಷ್ಠ ಕಲೆ ಯಕ್ಷಗಾನ. ಮನಸ್ಸನ್ನು ಅರಳಿಸುವ ಶಕ್ತಿ ಈ ಕಲೆಗಿದೆ. ಸರ್ವೋತ್ಕೃಷ್ಟವಾದ ಈ ಕಲೆಯನ್ನು ಯಕ್ಷ ಶಿಕ್ಷಣದ ಮೂಲಕ ಔಚಿತ್ಯಪೂರ್ಣವೇ ಆಗಿದೆ ಎಂದರು.
ಪುತ್ತೂರು ವಿವೇಕಾನಂದ ಕಾಲೇಜಿನ ಉಪನ್ಯಾಸಕ ಡಾ| ಅರುಣ ಪ್ರಕಾಶ್ ಅಭಿನಂದನಾ ಭಾಷಣ ಮಾಡಿದರು. ಕೇಪು ಕಲ್ಲಂಗಳ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಮಾಲತಿ ದಿನೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಪ್ರತಿಷ್ಠಾನದ ಸಂಚಾಲಕ ಚಣಿಲ ಸುಬ್ರಹ್ಮಣ್ಯ ಭಟ್ ಪ್ರಸಾವಿಸಿ ಸ್ವಾಗತಿಸಿದರು. ರಮೇಶ್ ಬಿ.ಕೆ ವಂದಿಸಿದರು. ಸೀತಾಲಕ್ಷ್ಮಿ ವರ್ಮ ಕಾರ್ಯಕ್ರಮ ನಿರೂಪಿಸಿದರು. ನಂತರ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಡಾ. ಪಟ್ಟಾಜೆ ಗಣೇಶ್ ಭಟ್ ವಿರಚಿತ ‘ಪಾಂಚಜನ್ಯ” ಎಂಬ ಯಕ್ಷಗಾನ ಬಯಲಾಟ ನಡೆಯಿತು.