ವಿಟ್ಲ: ಸರಕಾರಿ ಕನ್ನಡ ಶಾಲೆಗಳಲ್ಲಿ ಪ್ರತಿಯೊಂದು ಸವಲತ್ತುಗಳಿದ್ದರೂ ಮಕ್ಕಳ ಸಂಖ್ಯೆಯ ಕೊರತೆ ಎದ್ದು ಕಾಣುತ್ತಿದೆ. ಶಾಲೆಗಳಲ್ಲಿ ಆದಾಯದ ಮೂಲಗಳನ್ನು ಸೃಷ್ಟಿಸುವ ಅವಕಾಶವಿದ್ದು, ಊರಿನ ವಿದ್ಯಾಭಿಮಾನಿಗಳು ಶಾಲೆಯ ಸಮಸ್ಯೆಗಳಿಗೆ ಸ್ಪಂದಿಸಿದಾಗ, ಶಾಲೆಗಳ ದತ್ತು ಸ್ವೀಕಾರದಂತಹ ಜವಾಬ್ದಾರಿಯನ್ನು ವಹಿಸಿಕೊಂಡಾಗ ಸರ್ವ ರೀತಿಯಲ್ಲಿ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ ಹೇಳಿದರು.
ಅವರು ಅಳಿಕೆ ಗ್ರಾಮದ ಕಲ್ಲಜೇರ ವಿದ್ಯಾವಿಹಾರದ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆದ ರಜತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿ.ಪಂ. ಸದಸ್ಯ ತುಂಗಪ್ಪ ಬಂಗೇರ ಮಾತನಾಡಿ, ತಾವು ಕಲಿಯುವ ಶಾಲೆಗಳಲ್ಲಿ ಮಕ್ಕಳಿಗೆ ಪ್ರೀತಿ ಮೂಡಬೇಕು. ಸರಕಾರಿ ಶಾಲೆಗಳಿಗೆ ಹೋಲಿಸಿದರೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳು ಕಡಿಮೆಯಾಗಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಹ ಸರಕಾರಿ ಶಾಲೆಗಳ ಉಳಿವಿನಲ್ಲಿ ಮುತುವರ್ಜಿ ವಹಿಸಬೇಕೆಂದರು.
ಇದೇ ಸಂದರ್ಭದಲ್ಲಿ ಶಾಲೆಯ ಸ್ಥಾಪನೆಯಲ್ಲಿ ಮುಖ್ಯ ಪಾತ್ರ ವಹಿಸಿದ ನಿವೃತ್ತ ಶಿಕ್ಷಕ ಯಶೋಧರ ಬಂಗೇರ-ರಾಜೀವಿ ದಂಪತಿ, ಸ್ಥಳದಾನಿ ತಮ್ಮಣ್ಣ ಶೆಟ್ಟಿಯವರ ಪುತ್ರ ಚಂದ್ರಹಾಸ ಶೆಟ್ಟಿ-ವಿಮಲಾ ದಂಪತಿ, ಮುಖ್ಯ ಶಿಕ್ಷಕಿ ಗೀತಾ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಅಳಿಕೆ ಗ್ರಾ.ಪಂ. ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ವಹಿಸಿದ್ದರು. ವಿಟ್ಲ ಯಕ್ಷ ಭಾರತಿಯ ಸಂಜೀವ ಪೂಜಾರಿ, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಪೆಲ್ತಡ್ಕ, ಶಾಲೆಯ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಕೆ. ಉಪಸ್ಥಿತರಿದ್ದರು.
ನಿವೃತ್ತ ಶಿಕ್ಷಕ ಯಶೋಧರ ಬಂಗೇರ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಗೀತಾ ವಂದಿಸಿದರು. ಸದಾಶಿವ ಶೆಟ್ಟಿ ಮಡಿಯಾಲ ಸನ್ಮಾನಪತ್ರ ವಾಚಿಸಿದರು. ತುಂಬೆ ಪ.ಪೂ. ಕಾಲೇಜು ಉಪನ್ಯಾಸಕ ದಿನೇಶ್ ಶೆಟ್ಟಿ ಅಳಿಕೆ ಕಾರ್ಯಕ್ರಮ ನಿರೂಪಿಸಿದರು.
ಶಾಲಾ ವಿದ್ಯಾರ್ಥಿಗಳಿಂದ, ಸ್ತ್ರೀಶಕ್ತಿ ಸಂಘದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಭೆಯ ಬಳಿಕ ಪುಂಜಾಲಕಟ್ಟೆ ತಾಂಬೂಲ ಕಲಾವಿದರಿಂದ ’ಇಂಚಲಾ ಉಂಡಾ ನಂಬ್ಯರಾಪುಜಿ’ ತುಳು ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.