ವಿಟ್ಲ: ಮನೆ ನಿರ್ಮಾಣದ ಗುತ್ತಿಗೆ ಹಣಕ್ಕೆ ಸಂಬಂಧಿಸಿ ಇಬ್ಬರು ವ್ಯಕ್ತಿಗಳು ವಿಟ್ಲ ಪೊಲೀಸ್ ಠಾಣೆಯಲ್ಲಿ ಪರಸ್ಪರ ಹಲ್ಲೆ ಮತ್ತು ಜೀವ ಬೆದರಿಕೆಯ ಬಗ್ಗೆ ದೂರು ಹಾಗೂ ಪ್ರತಿ ದೂರು ನೀಡಿದ್ದಾರೆ.
ವಿಟ್ಲ ಮುಡ್ನೂರು ಗ್ರಾಮದ ಕಂಬಳಬೆಟ್ಟು ಶಾಂತಿ ನಗರ ನಿವಾಸಿ ರಿಝ್ವಾನ್ ಖಾನ್ ಮತ್ತು ಅಬ್ದುಲ್ ನಝೀರ್ ದೂರು ನೀಡಿದವರು.
ಹೊಸ ಮನೆ ನಿರ್ಮಾಣಕ್ಕೆಂದು ಆರೋಪಿ ನಝೀರ್ ಗೆ 19 ಲಕ್ಷ ರೂಪಾಯಿ ಗುತ್ತಿಗೆ ನೀಡಿದ್ದು, ಆದರೆ ನಝೀರ್ ಈವರೆಗೆ ಮನೆ ಕೆಲಸ ಪೂರ್ಣಗೊಳಿಸಿಲ್ಲ. ಫೆ.17ರಂದು ರಾತ್ರಿ ನಾನು ಇಲ್ಲದ ಸಮಯದಲ್ಲಿ ನಮ್ಮ ಮನೆಗೆ ಬಂದ ನಝೀರ್ ಮನೆ ನಿರ್ಮಾಣಕ್ಕೆ ಮತ್ತೆ ಹಣ ಕೊಡುವಂತೆ ನನ್ನ ಪತ್ನಿ ಕೇಳಿದ್ದು ಹಣ ನೀಡಲು ಪತ್ನಿ ನಿರಾಕರಿಸಿದ್ದರಿಂದ ನಝೀರ್ ವಾಪಸ್ ಹೋಗಿದ್ದ. ಆ ಬಳಿಕ ನಾನು ಮನೆಗೆ ಬಂದಾಗ ನಝೀರ್ ಹಣ ಕೇಳಿಕೊಂಡು ಬಂದ ವಿಷಯ ಪತ್ನಿ ತಿಳಿಸಿದ್ದು, ಅದರಂತೆ ಶಾಂತಿನಗರ ಜಂಕ್ಷನ್ ಗೆ ಹೋಗಿ ಈ ಬಗ್ಗೆ ನಝೀರ್ ಬಳಿ ವಿಚಾರಿಸಿದಾಗ ಆತ ಕೆಟ್ಟ ಪದಗಳಿಂದ ನಿಂದಿಸಿ ಕಲ್ಲಿನಿಂದ ನನಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ನಝೀರ್ ವಿರುದ್ಧ ರಿಝ್ವಾನ್ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.
ಅದೇ ರೀತಿ ರಿಝ್ವಾನ್ ವಿರುದ್ಧ ನಝೀರ್ ದೂರು ನೀಡಿದ್ದು, ಮೂರು ವರ್ಷಗಳ ಹಿಂದೆ ಮನೆ ನಿರ್ಮಾಣಕ್ಕೆಂದು ರಿಝ್ವಾನ್ ಗುತ್ತಿಗೆ ನೀಡಿದ್ದು, ಮನೆ ಕಾಮಗಾರಿ ಭಾಗಶಃ ಪೂರ್ಣಗೊಂಡಿದೆ. ಗುತ್ತಿಗೆ ಪ್ರಕಾರ ರಿಝ್ವನ್ ಇನ್ನೂ ಹಣ ನೀಡಲು ಬಾಕಿ ಇದ್ದು ಬಾಕಿ ಹಣ ನೀಡದೆ ಮನೆ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಡ ಹಾಕಿದ್ದಾನೆ. ಆದರೆ ಬಾಕಿ ಹಣ ನೀಡದೆ ಮನೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದಕ್ಕೆ ರಿಝ್ವಾನ್ ಮತ್ತು ಅಯಾನ್ ಖಾನ್ ಎಂಬಾತನೊಂದಿಗೆ ಫೆ.17ರಂದು ಮನೆಯೊಳಗೆ ಬಂದು ಕೆಟ್ಟ ಪದಗಳಿಂದ ನಿಂದಿಸಿ ಕಬ್ಬಿಣದ ರಾಡ್ ನಿಂದ ನನಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ. ಈ ವೇಳೆ ಮಧ್ಯ ಬಂದ ನನ್ನ ಪತ್ನಿಗೂ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಎರಡೂ ಪ್ರಕರಣವನ್ನು ದಾಖಲಿಸಿರುವ ವಿಟ್ಲ ಠಾಣಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.