ವಿಟ್ಲ: ಕರ್ನಾಟಕ ಪಂಚಾಯತ್‍ ರಾಜ್ ವ್ಯವಸ್ಥೆಯಲ್ಲಿ ಪರಿಣಾಮಕಾರಿಯಾಗಿ ತಳಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯಿತಿ ವ್ಯವಸ್ಥೆಯನ್ನು ಹಂತಹಂತವಾಗಿ ನಿಷ್ಕ್ರಿಯಗೊಳಿಸುತ್ತಿರುವ ಸರಕಾರದ ಕ್ರಮವನ್ನು ದ.ಕ.ಜಿಲ್ಲೆ ಗ್ರಾಮ ಪಂಚಾಯತ್ ಪ್ರತಿನಿಧಿಗಳ ಒಕ್ಕೂಟ ತೀವ್ರವಾಗಿ ಖಂಡಿಸಿದೆ.
ವಿಟ್ಲ ಪ್ರೆಸ್ ಕ್ಲಬ್‍ನಲ್ಲಿ ಮಂಗಳವಾರ ಒಕ್ಕೂಟದ ಅಧ್ಯಕ್ಷ ಸುಭಾಶ್ವಂದ್ರ ಶೆಟ್ಟಿ ಕುಳಾಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಖ್ಯವಾಗಿ ಗ್ರಾಮ ಸಭೆಗೆ ಮಹತ್ವ ನೀಡಿ ವಸತಿ ಯೋಜನೆ ಆಯ್ಕೆ ಹಾಗೂ ಅನುಷ್ಠಾನ ಅಧಿಕಾರ ಪಂಚಾಯತ್‍ಗಳಿಗೆ ಇದ್ದು ಇದನ್ನು ಶಾಸಕರಿಗೆ ನೀಡುವ ಹುನ್ನಾರ ನಡೆಯುತ್ತಿದೆ. ಅದಕ್ಕಾಗಿ ಒಂದೆರಡು ಪಂಚಾಯತ್‍ಗಳಲ್ಲಿ ನಡೆದಿರುವ ಅವ್ಯವಹಾರದ ತನಿಖೆಯ ನೆಪ ನೀಡಿ ವಸತಿ ಫಲಾನುಭವಿಗಳ ಆಯ್ಕೆ ಮತ್ತು ಪಾವತಿಯನ್ನು ತಡೆಹಿಡಿಯಲಾಗಿದೆ. ಬಡ ನಿರಾಶ್ರಿತರ ಮೇಲೆ ಗದಾ ಪ್ರಹಾರ ಮಾಡಲಾಗಿದೆ. ಈ ಹಿಂದೆ ದಿ| ವೈ.ಆರ್.ಘೋರ್ಪಡೆಯವರು ಗ್ರಾಮೀಣ ಅಭಿವೃದ್ಧಿ ಸಚಿವರಾಗಿದ್ದಾಗ ಶಾಸಕರ ಬೇಡಿಕೆಯನ್ನು ತಿರಸ್ಕರಿಸಿ ಪಂಚಾಯತ್‍ಗೆ ಪರಮಾಧಿಕಾರ ನೀಡಿದ್ದು ಈಗಲೂ ಶಾಸಕರ ಒತ್ತಡಕ್ಕೆ ಸರಕಾರ ಮಣಿಯಬಾರದು ಮತ್ತು ಅತೀ ಶೀಘ್ರವಾಗಿ ಬಡ ಫಲಾನುಭವಿಗಳಿಗೆ ಕಂತು ಬಿಡುಗಡೆ ಮಾಡಬೇಕು ಮತ್ತು 2019-2020ನೇ ಸಾಲಿಗೆ ಆಯ್ಕೆಯಾದ ತಲಾ 20 ಫಲಾನುಭವಿಗಳು ಪಟ್ಟಿಗೆ ಅನುಮೋದನೆ ನೀಡಬೇಕು ಎಂದು ಆಗ್ರಹಿಸಿದರು.
ಹಂತಹಂತವಾಗಿ ಪಂಚಾಯಿತಿ ಅಧಿಕಾರವನ್ನು ಮೊಟಕುಗೊಳಿಸುವ ಸರಕಾರದ ಜೊತೆಗೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮಟ್ಟದಲ್ಲಿ ನಿಯಮಬಾಹಿರವಾಗಿ ನಿರ್ಣಯಗಳನ್ನು ಮಾಡಿ ಗ್ರಾಮ ಪಂಚಾಯಿತಿ ಅಧಿಕಾರವನ್ನು ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳು ಕಸಿದುಕೊಳ್ಳುವ ಕೆಲಸ ನಡೆಯುತ್ತಿದೆ. ಇದನ್ನು ತಕ್ಷಣ ನಿಲ್ಲಿಸಬೇಕು. ಘನತ್ಯಾಜ್ಯ-ದ್ರವತ್ಯಾಜ್ಯ, ಶ್ಮಶಾನದ ಬಗ್ಗೆ ಹೇಳಿಕೆಗಳಲ್ಲಿ ಹಾಗೂ ಸುತ್ತೋಲೆಗಳಲ್ಲೇ ಮೇಲಧಿಕಾರಿಗಳು ಕೆಲಸ ಮಾಡುತ್ತಿದ್ದು ನೈಜ ಸಮಸ್ಯೆಯಾಗಿದೆ. ಇದಕ್ಕೆ ಬೇಕಾದ ಜಮೀನು ಒದಗಿಸುವಲ್ಲಿ ಕಂದಾಯ ಇಲಾಖೆಯ ವಿಳಂಬ ನೀತಿಗೆ ಪರಿಹಾರ ಒದಗಿಸಲು ಪ್ರಯತ್ನ ಮಾಡುತ್ತಿಲ್ಲ. ಇನ್ನು ಮುಂದೆ ಜಮೀನು ಆಗುವವರೆಗೆ ಯಾವುದೇ ಸಭೆ ಹಾಗು ಸುತ್ತೋಲೆಗಳಿಗೆ ಪಂಚಾಯಿತಿ ಆಡಳಿತ ಸ್ಪಂದಿಸದಿರಲು ಒಕ್ಕೂಟ ತೀರ್ಮಾನಿಸಿದೆ ಎಂದು ಅವರು ತಿಳಿಸಿದರು.
ಇ-ತಂತ್ರಾಂಶದಿಂದ 9/11ಎ ಇ ಸ್ವತ್ತು, ಪಡಿತರ ಇತ್ಯಾದಿ ಕೆಲಸಗಳು ನಡೆಯುತ್ತದೆ. ಕಳೆದ ಒಂದು ತಿಂಗಳಿನಿಂದ ಇದು ಸಂಪೂರ್ಣ ನಿಷ್ಕ್ರಿಯಗೊಂಡಿದ್ದು, ಮೇಲಧಿಕಾರಿಗಳನ್ನು ಅಥವಾ ಜನಪ್ರತಿನಿಧಿಯವರನ್ನು ಸಂಪರ್ಕಿಸಿದರೂ ಈವರೆಗೆ ಯಾವುದೇ ಪರಿಹಾರ ದೊರಕಲಿಲ್ಲ. ಪಂಚಾಯಿತಿಗಳಲ್ಲಿ ಕಡತಗಳು ರಾಶಿ ಬಿದ್ದಿದ್ದು ಜನಸಾಮಾನ್ಯರು ಪಂಚಾಯಿತಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಮೇಲಧಿಕಾರಿಗಳು ಸಾರ್ವಜನಿಕರೆದುರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಎಂದು ಹೇಳಿಕೆ ನೀಡಿ, ಸತ್ಯವನ್ನು ಮರೆಮಾಚಿ ತಮ್ಮ ಹೊಣೆಗಾರಿಕೆಯಿಂದ ಜಾರಿಕೊಳ್ಳುತ್ತಿದ್ದಾರೆ. ಇ-ತಂತ್ರಾಂಶದ ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕು ಎಂದು ಆಗ್ರಹಿಸಿದರು.
ಉದ್ಯೋಗ ಖಾತ್ರಿಯಂತಹ ಮಹತ್ವದ ಯೋಜನೆಗಳನ್ನು ರದ್ದುಗೊಳಿಸಲು ಪೂರ್ವ ತಯಾರಿ ನಡೆಯುತ್ತಿದ್ದು, ಅದಕ್ಕಾಗಿ ನಿಯಮಗಳನ್ನು ದಿನಕ್ಕೊಂದು ಜಾರಿ ಮಾಡಿ ಅನುಷ್ಠಾನವಾಗದಂತೆ ನೋಡಿಕೊಳ್ಳುವುದು. ಮಾತ್ರವಲ್ಲದೆ ಪಂಚಾಯತ್‍ನಿಂದ ಹಣಪಾವತಿ ವಿಳಂಬ ಆದರೆ ಸಂಬಂಧಪಟ್ಟವರ ಮೇಲೆ ದಂಡನೆ ಹಾಗೂ ಕಾನೂನು ಕ್ರಮ ಎಂಬುವುದಾಗಿ ಕಾನೂನು ಹೇಳುತ್ತದೆ. ಸರಕಾರದ ಧೋರಣೆಯಿಂದ ಕಳೆದ ಆರು ತಿಂಗಳಿನಿಂದ ಸಾಮಗ್ರಿ ಮೊತ್ತ ಹಾಗೂ ಮೂರು ತಿಂಗಳಿನಿಂದ ಕೂಲಿ ಮೊತ್ತ ವಿತರಿಸಲಿಲ್ಲ. ಇದಕ್ಕೆ ಯಾರಿಗೆ ದಂಡನೆ ಹಾಗೂ ಶಿಕ್ಷೆ ವಿಧಿಸುವುದು ಎನ್ನುವುದು ಪ್ರಶ್ನಾರ್ಹವಾಗಿದೆ. ಇದನ್ನು ಕೂಡಲೇ ಸರಿಪಡಿಸಿ ಹಣ ಬಿಡುಗಡೆ ಮಾಡಬೇಕು ಇಲ್ಲವಾದಲ್ಲಿ ಒಕ್ಕೂಟ ಸರಕಾರದ ವಿರುದ್ಧ ಕಾನೂನು ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.
ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಸಮಿತಿ ರಚನೆಯಾಗಿದ್ದರೂ ಈ ವರೆಗೆ 2 ಸಭೆ ನಡೆಸಿದ್ದು ಒಟ್ಟಾರೆ ಸಮಿತಿ ನಿಷ್ಕ್ರಿಯಗೊಳಿಸಿದ್ದು ಮಾತ್ರವಲ್ಲದೇ 3 ತಿಂಗಳಿಗೊಮ್ಮೆ ಅಧ್ಯಕ್ಷರ ಹಾಗೂ ಪಿಡಿಒಗಳ ಸಭೆ ನಡೆಸಬೇಕೆಂದು ನಿಯಮವಿದ್ದರೂ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಈ ವರೆಗೆ ಒಂದೇ ಒಂದು ಸಭೆ ನಡೆಸುವ ಇಚ್ಛಾಶಕ್ತಿ ಅಧಿಕಾರಿಗಳು ತೋರಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ತುರ್ತಾಗಿ ಈ ಸಭೆ ಕರೆದು ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದರು.
ಆಯುಷ್ಮಾನ್ ಕಾರ್ಡ್ ನೋಂದಾಣಿ ಕೂಡ ಪಂಚಾಯಿತಿಗೆ ನೀಡಿದ್ದು ಜಿಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಸತಾಯಿಸಲಾಗುತ್ತಿದೆ. ಇದಕ್ಕೆ ಪಂಚಾಯಿತಿ ಆಡಳಿತವನ್ನು ಸೇರಿಸಿ ಪ್ರಶ್ನಿಸುವ ಇನ್ನೊಂದು ಅವಕಾಶ ಜನರಿಗೆ ನೀಡಿದಂತಾಗಿದೆ. 100 ಕೆಲಸಗಳು ಪಂಚಾಯಿತಿಗಳಿಗೆ ವಹಿಸಿ ಸಿಬಂದಿಗಳ ಕೊರತೆ ಗಮನಿಸಿ ಸರಕಾರದಿಂದ ಹೆಚ್ಚುವರಿ ಸಿಬಂದಿ ಅನುಮೋದನೆಗೆ ಜಿಲ್ಲಾಡಳಿತಕ್ಕೆ ಸಂಪೂರ್ಣ ಅಧಿಕಾರ ನೀಡಿ ಆದೇಶ ನೀಡಿದ್ದರೂ ಅಧಿಕಾರಿ ವರ್ಗ ವಿಳಂಬ ನೀತಿ ಅನುಸರಿಸುತ್ತಿದೆ. ಪರಿಣಾಮವಾಗಿ ಪಂಚಾಯಿತಿ ಕೆಲಸ ಕಾರ್ಯಗಳಿಗೆ ತೊಂದರೆಯಾಗಿದೆ. ಇದಕ್ಕೆ ಕೂಡಲೇ ಅನುಮೋದನೆ ನೀಡಬೇಕು. ಈ ರೀತಿ ಆನೇಕ ಸಮಸ್ಯೆಗಳನ್ನು ಸೃಷ್ಟಿಸಿ ಪಂಚಾಯತನ್ನು ನಿಷ್ಕ್ರಿಯಗೊಳಿಸುವ ಪ್ರಯತ್ನವನ್ನು ಬಿಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಎದುರಿಸಬೇಕಾದಿತು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಒಕ್ಕೂಟದ ಉಪಾಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಬಂಟ್ವಾಳ ಒಕ್ಕೂಟದ ಅಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here