Monday, October 23, 2023

ವಿಟ್ಲ: ಮೆಸ್ಕಾಂ ಜನಸಂಪರ್ಕ ಸಭೆ

Must read

ವಿಟ್ಲ: ಮೆಸ್ಕಾಂ ಕಡೆಯಿಂದ ಮಾಡಬೇಕಾದ ಕೆಲಸವನ್ನು ತಕ್ಷಣ ಮಾಡಬೇಕು. ಸಾರ್ವಜನಿಕರು ಹೇಳಿದ ಮೇಲೆ ಕೆಲಸ ಮಾಡುವುದರಲ್ಲಿ ಅರ್ಥವಿಲ್ಲ. ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಲಾಗದವರಿಗೆ ಶೋಕಾಸ್ ನೋಟೀಸ್ ನೀಡಬೇಕಾಗುತ್ತದೆ. ನಿರ್ವಹಣೆ ಕಾಮಗಾರಿ ನಿಧಾನವಾಗಿದೆ ಎನ್ನುವ ಮಾತು ವಿಟ್ಲದಲ್ಲಿ ಬರಬಾರದು ಎಂದು ಮೆಸ್ಕಾಂ ಅಧೀಕ್ಷಕ ಮಂಜಪ್ಪ ಎಚ್ಚರಿಸಿದರು.
ಅವರು ಮಂಗಳವಾರ ವಿಟ್ಲ ಜೆ. ಎಲ್. ಅಡಿಟೋರಿಯಂನಲ್ಲಿ ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ವಿಟ್ಲ ಉಪವಿಭಾಗ ಮಟ್ಟದ ಜನ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ ಜನಸಂಪರ್ಕ ಸಭೆಯಲ್ಲಿ ನೀಡಲಾದ ಸಾರ್ವಜನಿಕರ ದೂರುಗಳ ಪೈಕಿ ಹೆಚ್ಚಿನ ದೂರುಗಳನ್ನು ಪರಿಹರಿಸುವ ಕಾರ್ಯವನ್ನು ಈಗಾಗಲೇ ಮಾಡಲಾಗಿದೆ. ಅಗತ್ಯ ಕಾಮಗಾರಿಗಳ ಅಂದಾಜು ಪಟ್ಟಿ ಸಿದ್ದ ಪಡಿಸಿ ವಿಭಾಗೀಯ ಕಚೇರಿಗೆ ಕಳುಹಿಸಿಕೊಡಲಾಗಿದೆ. ಉಳಿದವುಗಳನ್ನು ಮುಂದಿನ ದಿನಗಳಲ್ಲಿ ಪರಿಹರಿಸಲು ಪ್ರಯತ್ನಿಸಲಾಗುವುದು ಎಂದರು.
ಅಳಿಕೆ ಗ್ರಾ.ಪಂ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಮಾತನಾಡಿ ಪೆರುವಾಯಿ ಫೀಡರ್‍ನಲ್ಲಿ ವಾರಕ್ಕೆ ಒಂದು ದಿನ ವಿದ್ಯುತ್ ಸ್ಥಗಿತವಾಗುತ್ತಿದ್ದಲ್ಲಿ ಈಗ ಎರಡು ದಿನವಾಗುತ್ತಿದೆ. ಇದರಿಂದ ಕೃಷಿಕರಿಗೆ ಬೆಳೆಗಳಿಗೆ ನೀರುಣಿಸಲು ಹಾಗೂ ಪಂಚಾಯಿತಿ ಕುಡಿಯುವ ನೀರಿನ ಸರಬರಾಜಿಗೆ ಸಮಸ್ಯೆಯಾಗುತ್ತಿದೆ. ಜನರಿಗೆ ಪದೇ ಪದೇ ಸಮಸ್ಯೆಯಾಗದ ರೀತಿಯಲ್ಲಿ ಕಾಮಗಾರಿಗಳನ್ನು ನಡೆಸಬೇಕು. ಜಾಗದ ನೆಪವನ್ನು ಹೇಳದೆ ಪ್ರತ್ಯೇಕ ಸ್ಥಳದಲ್ಲಾದರೂ, ಕುದ್ದುಪದವು ಸಬ್ ಸ್ಟೇಷನ್ ಕಾಮಗಾರಿಯನ್ನು ನಡೆಸಲೇಬೇಕು ಎಂದು ಆಗ್ರಹಿಸಿದರು.
ನೆಲ ಜಲ ಸಂರಕ್ಷಣಾ ಸಮಿತಿಯ ಅಧ್ಯಕ್ಷ ರಾಮಣ್ಣ ಪಾಳಿಗೆ ಮಾತನಾಡಿ ಉಪವಿಭಾಗ ಮಟ್ಟದ ಜನ ಸಂಪರ್ಕ ಸಭೆಗೆ ಜನಪ್ರತಿನಿಧಿಗಳು ಆಗಮಿಸಲೇ ಬೇಕು. ಇಲ್ಲವಾದರೆ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕುದ್ದುಪದವು ಸಬ್‍ಸ್ಟೇಷನ್ ರೀತಿಯ ಕಾಮಗಾರಿಗಳಿಗೆ ಚಾಲನೆ ಸಿಗುವುದೇ ಇಲ್ಲ ಎಂದು ಆರೋಪಿಸಿದರು.
ಪೆರ್ನೆ ಬಿಳಿಯೂರು ಗ್ರಾಮಗಳಲ್ಲಿ ಲೈನ್ ಮ್ಯಾನ್‍ನ ಕೊರತೆಯಿದ್ದು, ಸಮಸ್ಯೆಯಾಗುತ್ತಿದೆ. ಈ ಭಾಗದಲ್ಲಿ ನೂತನ ಶಾಖೆಯನ್ನು ತೆರೆಯುವಂತೆ ಪೆರ್ನೆ ಬಿಳಿಯೂರು ಗ್ರಾಮಸ್ಥರು ಮನವಿ ಮಾಡಿದರು. ಕೃಷ್ಣ ಕನ್ಯಾನ ಮಾತನಾಡಿ ಕನ್ಯಾನದಲ್ಲಿ ಮೆಸ್ಕಾಂಗೆ 5 ಸೆಂಟ್ಸ್ ಜಾಗ ಮಂಜೂರಾಗಿದ್ದು, ಅಗತ್ಯ ಕಟ್ಟಡ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದರು.
ಜನ ಸಂಪರ್ಕ ಸಭೆಯ ಬಗ್ಗೆ ಗ್ರಾ.ಪಂ ಗಳಿಗೆ ಸಭೆಯ ಹಿಂದಿನ ದಿವಸ ಮಾಹಿತಿ ನೀಡಲಾಗುತ್ತಿದ್ದು, ಇದು ಕ್ರಮ ಸರಿಯಲ್ಲ. ದಿನ ನಿಗದಿಯಾದ ಕೂಡಲೇ ಮಾಹಿತಿ ನೀಡಿದಲ್ಲಿ ಗ್ರಾ.ಪಂ ನೋಟೀಸ್ ಬೋರ್ಡುಗಳಲ್ಲಿ ಆ ಬಗ್ಗೆ ಮಾಹಿತಿ ಹಾಕಲಾಗುವುದು. ಆಗ ಗ್ರಾಮಸ್ಥರು ಇಂತಹ ಸಭೆಗಳಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ತಿಳಿಸಲು ಸಹಕಾರಿಯಾಗುತ್ತದೆ ಎಂದು ಗ್ರಾ. ಪಂ ಅಧ್ಯಕ್ಷರಾದ ತಾರನಾಥ ಆಳ್ವ ಕುಕ್ಕೆಬೆಟ್ಟು, ಪದ್ಮನಾಭ ಪೂಜಾರಿ ಸಣ್ಣಗುತ್ತು, ರವೀಶ್ ಶೆಟ್ಟಿ ಕರ್ಕಳ ತಿಳಿಸಿದರು.

ಎಕ್ಸಿಕ್ಯೂಟೀವ್ ಇಂಜಿನಿಯರ್ ರಾಮಚಂದ್ರ, ಅಸಿಸ್ಟೆಂಟ್ ಎಕ್ಸಿಕ್ಯೂಟೀವ್ ಇಂಜಿನಿಯರ್ ಪ್ರವೀಣ್ ಜೋಶಿ ಹಾಗೂ ನಾನಾ ಶಾಖಾ ಮುಖ್ಯಸ್ಥರು, ಲೈನ್‍ಮ್ಯಾನ್‍ಗಳು ಉಪಸ್ಥಿತರಿದ್ದರು.

 

More articles

Latest article