ವಿಟ್ಲ: ಕೊಳ್ನಾಡು ಗ್ರಾಮ ಪಂಚಾಯಿತಿಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಸಾಲೆತ್ತೂರು ನೇತ್ರಾವತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಭೆಯಲ್ಲಿ ಕಂದಾಯ ಇಲಾಖೆಯಲ್ಲಿ ಘನತ್ಯಾಜ್ಯ ವಿಲೇವಾರಿ ಹಾಗು ಹಿಂದೂ ರುದ್ರಭೂಮಿಗೆ ಜಮೀನು ಕಾಯ್ದಿರಿಸಲು 2016ರಲ್ಲಿ ಪಂಚಾಯತ್ ನೀಡಿರುವ ಬೇಡಿಕೆ ಈ ವರೆಗೆ ಇತ್ಯರ್ಥವಾಗದ ಬಗ್ಗೆ ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿ ಸರಕಾರಿ ಜಾಗ ಲಭ್ಯವಿಲ್ಲದಿದ್ದರೆ ಖಾಸಗಿ ಜಮೀನು ಖರೀದಿಸಿಯಾದರೂ ನೀಡಬೇಕೆಂದು ಸರಕಾರಿ ಆದೇಶವಿದ್ದರೂ ಯಾಕೆ ವಿಳಂಬ ನೀತಿ ಅನುಸರಿಸುತ್ತೀರಿ, ಸರಕಾರಿ ಜಮೀನು ಲಭ್ಯವಿಲ್ಲವಾದರೆ ಹಿಂಬರಹ ನೀಡಿ ಎಂದು ಖಡಕ್ಕಾಗಿ ತಿಳಿಸಿದರು.
ಗ್ರಾಮ ಕರಣಿಕರಾದ ಅನಿಲ್ ಕುಮಾರ್‌ರವರು ತಹಶೀಲ್ದಾರರರು ಈಗಾಗಲೇ ಸಂಬಂದಪಟ್ಟವರಿಗೆ ಸೂಚನೆ ನೀಡಿ ಕ್ರಮ ಕೈಗೊಳ್ಳಲು ಸೂಚಿಸಿರುತ್ತಾರೆ. ಶೀಘ್ರದಲ್ಲೇ ಕಡತ ಕಳುಹಿಸಿಕೊಡುವುದಾಗಿ ಸ್ಪಷ್ಟನೆ ನೀಡಿದರು.
ಮೆಸ್ಕಾಂ ಇಂಜಿನಿಯರ್ ಪ್ರಸನ್ನ ಕುಮಾರ್‌ರವರಿಗೆ ಮಾದರಿ ವಿದ್ಯುತ್ ಗ್ರಾಮ ಯೋಜನೆಯ ಅನುಷ್ಠಾನದ ಬಗ್ಗೆ ಮಾಹಿತಿ ನೀಡುವಂತೆ ಅಧ್ಯಕ್ಷರು ಸೂಚಿಸಿದಾಗ ಇದರಲ್ಲಿದ್ದ ಕಡಪಿಕೇರಿ ಲೈನ್ ಅಳವಡಿಕೆ ಕಾಮಗಾರಿ ಮುಗಿದಿದೆ. ಉಳಿದ ಕಾಮಗಾರಿ ಅದೇ ಯೋಜನೆಯಂತೆ ಅನುಷ್ಠಾನವಾಗಲಿದೆ ಎಂದರು.
ಕಾಡುಮಠ ಶಾಲೆಯ ಎಸ್‌ಡಿಎಂಸಿ ರಚನೆ ಬಗ್ಗೆ ಪಂಚಾಯಿತಿ ಸ್ಥಾಯಿ ಸಮಿತಿಯನ್ನು ನಿರ್ಲಕ್ಷಿಸಿ ಕ್ರಮ ವಹಿಸಿರುವುದನ್ನು ಸಾಮಾನ್ಯ ಸಭೆ ತಿರಸ್ಕರಿಸಿದೆ. ಮುಂದೆ ನಿಯಮಾನುಸಾರ ಬಂದಲ್ಲಿ ಮಾತ್ರ ಪಂಚಾಯಿತಿ ಸಮಿತಿಗೆ ಅನುಮೋದನೆ ನೀಡಲಿದೆ ಎಂದು ಪಿಡಿಒ ತಿಳಿಸಿದರು. ಶಾಲಾ ದುರಸ್ತಿ ಕಾಮಗಾರಿಗಳು ಕುಳಾಲು, ತಾಳಿತ್ತನೂಜಿ, ಮಂಕುಡೆಗೆ ಅನುದಾನ ಲಭ್ಯವಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಎಲ್ಲಾ ಶಾಲೆಗಳು ಎನ್‌ಆರ್‌ಇಜಿಎ ಮೂಲಕ ಕಂಪೌಂಡ್ ರಚನೆಗೆ ಪಂಚಾಯತ್ ನಿಗದಿಪಡಿಸಿದ ಅನುದಾನವನ್ನು ಬಳಕೆ ಮಾಡಬೇಕೆಂದು ಅಧ್ಯಕ್ಷರು ಸೂಚಿಸಿದರು.
ಸಾಲೆತ್ತೂರು ಬಸ್ ಸ್ಟಾಂಡ್ ಮಧ್ಯಭಾಗದಲ್ಲಿರುವ ವಿದ್ಯುತ್ ಕಂಬ ಅಪಾಯಕಾರಿಯಾಗಿದ್ದು, ಬದಲಾವಣೆಗೆ ಕ್ರಮ ಕೈಗೊಳ್ಳಲು ಸಾಲೆತ್ತೂರು ಜೂನಿಯರ್ ಇಂಜಿನಿಯರ್‌ರವರಿಗೆ ಸೂಚಿಸಲಾಯಿತು. ಪಾಣಾಜೆಕೋಡಿ ಅಂಗನವಾಡಿ ಕೇಂದ್ರ ಕಾಮಗಾರಿ ಪ್ರಗತಿಯಲ್ಲಿದ್ದು ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಎನ್‌ಆರ್‌ಇಜಿಎ ಇಂಜಿನಿಯರ್ ನಳಿನಾಕ್ಷಿ ತಿಳಿಸಿದರು. ಶಾಲಾ ಮಕ್ಕಳ ಸ್ಕಾಲರ್‌ಶಿಪ್ ಈ ಹಿಂದೆ ಶಾಲೆಯಿಂದ ಮಾಡಿದಾಗ ಸರಿಯಾಗಿದ್ದು ಈಗ ಪೋಷಕರೇ ಸೈಬರ್‌ನಲ್ಲಿ ಮಾಡುವುದರಿಂದ ಸಮಸ್ಯೆಯಾಗಿದ್ದು ಯಾವುದೇ ಮಾಹಿತಿ ಸಿಗುತ್ತಿಲ್ಲ. ಆದ್ದರಿಂದ ಇದರ ಜವಾಬ್ದಾರಿ ಶಾಲೆಯವರಿಗೇ ನೀಡಬೇಕೆಂದು ಮುಖ್ಯ ಶಿಕ್ಷಕರುಗಳು ವಿನಂತಿಸಿದರು. ಅವಶ್ಯಕತೆಗೆ ಸರಿಯಾಗಿ ಬಿಸಿಯೂಟ ಅಡುಗೆಗೆ ಸಿಲಿಂಡರ್ ನೀಡಬೇಕಾಗಿದೆ. 99 ವಿದ್ಯಾರ್ಥಿಗಳಿದ್ದರೂ ಒಂದೇ ಸಿಲಿಂಡರ್ ನೀಡುವುದು ಸಮಂಜಸವಲ್ಲ ಎಂದು ಜಿ.ಪಂ. ಸದಸ್ಯ ಎಂ.ಎಸ್ ಮಹಮ್ಮದ್ ಅಸಮಾಧನಾ ವ್ಯಕ್ತಪಡಿಸಿದರು. ತಾಳಿತ್ತನೂಜಿ ಶಾಲೆಗೆ ಮಂಜೂರಾದ 10 ಲಕ್ಷ ಅನುದಾನ ಮಳೆ ಹಾನಿ ಕಾಮಗಾರಿ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕೆಂದು ಅಧ್ಯಕ್ಷರು ಜಿ ಪಂಚಾಯತ್ ಇಂಜಿನಿಯರ್ ನಾಗೇಶ್‌ರವರಿಗೆ ಸೂಚಿಸಿದರು.
ತೋಟಗಾರಿಕೆ ಹಾಗೂ ಕೃಷಿ ಇಲಾಖಾ ಸಬ್ಸಿಡಿ ಹಾಗು ಪ್ರವಾಸ ಕಾರ್ಯಕ್ರಮಗಳು ಎಲ್ಲರಿಗೂ ಪ್ರಯೋಜನವಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಕೃಷಿ ಅಧಿಕಾರಿ ಎಸ್.ಕೆ ಸರಿಕಾರ್ ಹಾಗೂ ತೋಟಗಾರಿಕಾ ಅಧಿಕಾರಿ ದಿನೇಶ್‌ರವರಿಗೆ ಸೂಚಿಸಿದರು.
ಸಭೆಯಲ್ಲಿ ಗ್ರಾ.ಪಂ. ಸದಸ್ಯರಾದ ಪವಿತ್ರಪೂಂಜ, ಜಯಂತಿ ಎಸ್. ಪೂಜಾರಿ, ಯೂಸುಫ್, ಐರಿನ್ ಡಿಸೋಜ ಉಪಸ್ಥಿತರಿದ್ದರು. ಪಿಡಿಒ ರೋಹಿಣಿ ಸ್ವಾಗತಿಸಿ ವಂದಿಸಿದರು.