ವಿಟ್ಲ: ವಿಟ್ಲ ಪಟ್ಟಣ ಪಂಚಾಯಿತಿಯ 18 ಸದಸ್ಯರ ವಾರ್ಡ್‌ಗೆ ಒಂದೇ ರೀತಿಯಾಗಿ ಅನುದಾನ ಹಂಚಿಕೆ ಮಾಡಬೇಕು. ಯಾವುದೇ ವಾರ್ಡ್‌ನಲ್ಲಿ ಕಾಮಗಾರಿ ನಡೆಸುವ ಬಗ್ಗೆ ಸಂಬಂಧಪಟ್ಟ ಸದಸ್ಯರ ಗಮನಕ್ಕೆ ತರಬೇಕು. ತಮಗೆ ಇಷ್ಟಬಂದಂತೆ ಕಾಮಗಾರಿ ನಡೆಸಬಾರದು ಎಂದು ವಿಟ್ಲ ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯರು ಹೇಳಿದರು.
ಶುಕ್ರವಾರ ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಮಯಂತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯರಾದ ರಾಮ್‌ದಾಸ್ ಶೆಣೈ, ರವಿಪ್ರಕಾಶ್, ಶ್ರೀಕೃಷ್ಣ ಅವರು ಇಲ್ಲಿ 18 ಸದಸ್ಯರಿದ್ದಾರೆ. ಆದರೆ ಕೇವಲ 16 ಸದಸ್ಯರಿಗೆ ಮಾತ್ರ 3 ಲಕ್ಷದಂತೆ ಅನುದಾನ ಕಾಯ್ದಿರಿಸಿದ್ದು, ಸರಿಯಲ್ಲ. ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಅಧ್ಯಕ್ಷೆ ದಮಯಂತಿ ಅವರು ಈ ಬಗ್ಗೆ ಸ್ಥಳೀಯ ಸದಸ್ಯೆ ಚಂದ್ರಕಾಂತಿ ಶೆಟ್ಟಿ ಅವರಿಗೆ ಮಾಹಿತಿ ನೀಡಲಾಗಿದೆ ಎಂದಾಗ ಚಂದ್ರಕಾಂತಿ ಅವರು ಈ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು. ಹಿರಿಯ ಸದಸ್ಯ ಅಶೋಕ್ ಕುಮಾರ್ ಶೆಟ್ಟಿ ಮಾತನಾಡಿ ಅಧ್ಯಕ್ಷರಿಗೆ ಪವರ್ ಇಲ್ಲ ಎಂಬ ಹೇಳಿಕೆ ನೀಡುವುದು ಸರಿಯಲ್ಲ. ಆದ್ಯತೆ ಮೇರೆಗೆ ಅನುದಾನ ನೀಡಬೇಕು. ಅಧ್ಯಕ್ಷರಿಗೆ ಸಹಕಾರ ನೀಡಬೇಕು. ದ್ವೇಷದಿಂದ ಅಭಿವೃದ್ಧಿ ಸಾಧ್ಯವಿಲ್ಲ. ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡಬೇಕು ಎಂದರು.

ಅಶೋಕ್ ಕುಮಾರ್ ಶೆಟ್ಟಿ ಮಾತನಾಡಿ ಹಾಲಿ ಶಾಸಕರಿಗೆ ಸರ್ಕಾರದ ಮನೆ ಹಂಚುವ ವೇಳೆ ಬಿಜೆಪಿ ಸದಸ್ಯರು ಒತ್ತಡ ಹಾಕಿ ತಮಗೆ ಬೇಕಾದವರಿಗೆ ಮಾತ್ರ ನೀಡುವ ಮೂಲಕ ರಾಜಕೀಯ ಮಾಡಿದ್ದಾರೆ. ಈ ಸಂದರ್ಭ ಮಧ್ಯೆ ಪ್ರವೇಶಿಸಿದ ಬಿಜೆಪಿ ಸದಸ್ಯರಾದ ರವಿಪ್ರಕಾಶ್ ಹಾಗೂ ಅರುಣ್ ಎಂ ವಿಟ್ಲ ಅವರು ತಮ್ಮ ಅವಧಿಯಲ್ಲಿ ಶಕುಂತಳಾ ಶೆಟ್ಟಿ ಅವರು ತಮ್ಮ ವಾರ್ಡ್‌ಗೆ ಯಾವುದೇ ಅನುದಾನ ನೀಡಿಲ್ಲ. ಹಾಲಿ ಶಾಸಕ ಸಂಜೀವ ಮಠಂದೂರು ಅವರು ಎಲ್ಲಾ ವಾರ್ಡ್‌ಗೆ ಅನುದಾನ ನೀಡಿದ್ದಾರೆ ಯಾವುದೇ ರಾಜಕೀಯ ಮಾಡಿಲ್ಲ ಎಂದರು. ಸದಸ್ಯ ಲೋಕನಾಥ ಶೆಟ್ಟಿ ಕೊಲ್ಯ ಧ್ವನಿಗೂಡಿಸಿದರು. ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ಸದಸ್ಯ ಹಸೈನಾರ್ ನೆಲ್ಲಿಗುಡ್ಡೆ ಅವರು ಇಲ್ಲಿ ಅಭಿವೃದ್ಧಿ ಮುಖ್ಯ ರಾಜಕೀಯ ಸರಿಯಲ್ಲ. ತಮ್ಮ ವಾರ್ಡ್‌ಗೆ ಬಂದ ಮನೆಯನ್ನು ಇನ್ನೊಂದು ವಾರ್ಡ್‌ಗೆ ಕೊಟ್ಟಿದ್ದೇನೆ. ಆಗ ನಾನು ರಾಜಕೀಯ ಮಾಡಿಲ್ಲ. ಈ ಸಂದರ್ಭ ಎರಡು ಪಕ್ಷದ ನಡುವೆ ಭಾರೀ ವಾದಪ್ರತಿವಾದ ನಡೆಯಿತು. ಇದೇ ವಿಚಾರದಲ್ಲಿ ಒಂದು ಗಂಟೆಗಳ ಕಾಲ ಚರ್ಚೆ ನಡೆಯಿತು. ಕಂದಾಯ ನಿರೀಕ್ಷಕ ಹಾಗೂ ಎಂಜಿನಿಯರ್ ಅವರು ಸಾಮಾನ್ಯ ಸಭೆಗೆ ಗೈರು ಹಾಜರಾದ ಬಗ್ಗೆ ಅಸಮಾಧಾನ ಹಸೈನಾರ್ ನೆಲ್ಲಿಗುಡ್ಡೆ ವ್ಯಕ್ತಪಡಿಸಿದರು. ಬಳಿಕ ವಿವಿಧ ನಿರ್ಣಯಗಳನ್ನು ಅಂಗಿಕರಿಸಲಾಯಿತು.

ಉಪಾಧ್ಯಕ್ಷ ಜಯಂತ ವಿಟ್ಲ, ಮುಖ್ಯಾಧಿಕಾರಿ ಮಾಲಿನಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಉಷಾ ಕೃಷ್ಣಪ್ಪ, ಸದಸ್ಯರಾದ ಸುನಿತಾ ಕೋಟ್ಯಾನ್, ಸಂಧ್ಯಾ ಮೋಹನ್, ಲತಾ ಅಶೋಕ್ ಪೂಜಾರಿ, ಅಬ್ಬೋಕರೆ ವಿ., ಇಂದಿರಾ ಅಡ್ಯಾಳಿ, ಮಂಜುನಾಥ ಕಲ್ಲಕಟ್ಟ, ಗೀತಾ ಪುರಂದರ, ಸಿಬ್ಬಂದಿಗಳಾದ ಚಂದ್ರಶೇಖರ ವರ್ಮ, ರತ್ನ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here