


ಉಜಿರೆ: ಕಲ್ಮಂಜ ಗ್ರಾಮದ ನಿವಾಸಿ ರಾಮಣ್ಣಗೌಡ (ಹೆಸರು ಬದಲಾಯಿಸಿದೆ) ಎಂಬವರ ಬ್ಯಾಂಕ್ ಖಾತೆಯಿಂದ ಎಟಿಎಂ ನಂಬರ್ ಪಡೆದು ಹಣ ಲಪಟಾಯಿಸಿದ ಪ್ರಕರಣ ವರದಿಯಾಗಿದೆ.
ಇದೇ 15 ರಂದು ಶನಿವಾರ ಅಪರಿಚಿತ ವ್ಯಕ್ತಿಯೊಬ್ಬ ರಾಮಣ್ಣ ಗೌಡರಿಗೆ ದೂರವಾಣಿ ಕರೆ ಮಾಡಿ ಮಾತಿನ ಮೋಡಿಯಿಂದ ಮರುಳು ಮಾಡಿದ. ತಾನು ಕೆನರಾ ಬ್ಯಾಂಕ್ ಪ್ರಧಾನ ಕಚೇರಿಯ ಅಧಿಕಾರಿ ಎಂದು ರೈಲು ಬಿಟ್ಟ! ಅದೂ ಹಿಂದಿಯಲ್ಲಿ ನಿರರ್ಗಳವಾಗಿ ಕರ್ಣರಸಾಯನವಾಗಿ ಮಾತನಾಡಿದ ಅಧಿಕಾರಿ ಮಾತು ಕೇಳಿ ಈತ ಎಟಿಎಂ ನಂಬರ್ ಹೇಳಿದ.
ಧರ್ಮಸ್ಥಳ ಕೆನರಾ ಬ್ಯಾಂಕ್ ಶಾಖೆಯಲ್ಲಿರುವ ರಾಮಣ್ಣ ಗೌಡರ ಉಳಿತಾಯ ಖಾತೆಯಿಂದ ಇದೇ 15 ರಂದು ಶನಿವಾರ ಸಂಜೆ ಗಂಟೆ 6.45ಕ್ಕೆ ರೂ. 4999/-, 6.47ಕ್ಕೆ 4,999/- 6.48ಕ್ಕೆ 9500/- ಹಾಗೂ 6.53ಕ್ಕೆ ರೂ. 1000/- ಹಣವನ್ನು ಲಪಟಾಯಿಸಲಾಗಿದೆ. ಒಟ್ಟು ರೂ. 20498/-ನ್ನು 5 ನಿಮಿಷದಲ್ಲಿ ಲಪಟಾಯಿಸಲಾಗಿದೆ.
ಇದೇ 17 ರಂದು ಸೋಮವಾರ ಧರ್ಮಸ್ಥಳ ಕೆನರಾ ಬ್ಯಾಂಕ್ ಶಾಖೆಗೆ ಬಂದು ಪಾಸ್ ಬುಕ್ ತೋರಿಸಿದಾಗ ಹಣ ಲಪಟಾಯಿಸಿದ ವಿಷಯ ಬೆಳಕಿಗೆ ಬಂದಿದೆ.
ಯಾರಿಗೂ ಎಟಿಎಂ ನಂಬರ್ ಕೊಡಬಾರದೆಂದು ಅನೇಕ ಬಾರಿ ಬ್ಯಾಂಕಿನವರೆ ಗ್ರಾಹಕರಿಗೆ ಎಚ್ಚರಿಕೆ ಕೊಡುತ್ತಾರೆ, ಸಂದೇಶ ರವಾನಿಸುತ್ತಾರೆ. ಇನ್ನಾದರೂ ಗ್ರಾಹಕರು ಎಚ್ಚರಿಕೆ ವಹಿಸಬೇಕು.


