ಬಂಟ್ವಾಳ: ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ 36ನೇ ವರ್ಷಾಚರಣೆ ಪ್ರಯುಕ್ತ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಮಾ.8ರಂದು ನಡೆಯಲಿರುವ 12ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಪ್ರಯುಕ್ತ ವಧು-ವರರ ನಿಶ್ಚಿತಾರ್ಥ ಕಾರ್ಯಕ್ರಮ ಮಾ.1ರಂದು ಪುಂಜಾಲಕಟ್ಟೆ ನಂದಗೋಕುಲ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಜರಗಲಿದೆ.
ಈ ಬಾರಿ ಒಟ್ಟು 12 ಜೋಡಿಗಳಿಗೆ ವಿವಾಹ ನಡೆಯಲಿದ್ದು, ತುಳುನಾಡಿನ ಸಂಪ್ರದಾಯ ಪ್ರಕಾರ ನಿಶ್ಚಿತಾರ್ಥ ನಡೆಯಲಿದೆ. ಈ ಸಂದರ್ಭದಲ್ಲಿ ಭಾವೀ ವಧು-ವರರಿಗೆ ಮಂಗಳವಸ್ತ್ರವನ್ನು ವಿತರಿಸಲಾಗುವುದು.ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ಅವರು ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮೆಸ್ಕಾಂ ಅಧೀಕ್ಷಕ ಮಂಜಪ್ಪ, ತುಳು ಸಾಹಿತ್ಯ ಅಕಾಡೆಮಿ ಸದಸ್ಯೆ ಮಲ್ಲಿಕಾ ಶೆಟ್ಟಿ, ಕಜೆಕಾರು ಸಹಕಾರಿ ಸಂಘದ ಅಧ್ಯಕ್ಷ ವಿನ್ಸೆಂಟ್ ಸೇರಾ, ಪಿಲಾತಬೆಟ್ಟು ಗ್ರಾ.ಪಂ. ಪಿಡಿಒ ರಾಜಶೇಖರ್ ರೈ, ಬಡಗಕಜೆಕಾರ್ ಗ್ರಾ.ಪಂ. ಅಧ್ಯಕ್ಷ ವಜ್ರ ಪೂಜಾರಿ ಬಾರ್‍ದೊಟ್ಟು, ತುಳುನಾಡ ರಕ್ಷಣಾ ವೇದಿಕೆ ಬಂಟ್ವಾಳ ತಾ. ಅಧ್ಯಕ್ಷ ರಮೇಶ್ ಶೆಟ್ಟಿ ಮಜಲೋಡಿ ಮೊದಲಾದವರು ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಕ್ಲಬ್ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಮತ್ತು ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.