ಬಂಟ್ವಾಳ, ಫೆ.13: ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ನಡೆದ ಡಕಾಯಿತಿ ಪ್ರಕರಣಗಳಲ್ಲಿ ಭಾಗಿಯಾದ ಆರೋಪವನ್ನು ಎದುರಿಸುತ್ತಿರುವ ಆರು ಮಂದಿ ಆರೋಪಿಗಳಿಗೆ ಮಂಗಳೂರಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಶಿಕ್ಷೆ ಹಾಗೂ ದಂಡ ವಿಧಿಸಿ ಗುರುವಾರ ತೀರ್ಪು ನೀಡಿದೆ.

ಚಿಕ್ಕಮಗಳೂರಿನ ಕಡೂರು ಯರದಕೆರೆ ನಿವಾಸಿ ತಿಮ್ಮಯ್ಯ (55), ಹಾಸನ ಜಿಲ್ಲೆಯ ಇಡಬ್ಲ್ಯುಎಸ್ ಕುವೆಂಪು ನಗರದ ನಿವಾಸಿ ಜಯರಾಜ ಸ್ವಾಮಿ (45), ಹಾಸನದ ಕಟ್ಟಾಯಲ್ ಹೋಬಳಿಯ ನಿವಾಸಿ ಗಂಗಾ (32), ಶಿವಮೊಗ್ಗ ಜಿಲ್ಲೆಯ ಮತ್ತೂರು ನಿವಾಸಿ ನೇತ್ರಾ (35), ಶಿವಮೊಗ್ಗದ ಶಂಕರ್ ಸರ್ಕಲ್ ಸಮೀಪದ ರಾಜೇಂದ್ರ (65), ಬೆಳ್ತಂಗಡಿಯ ಬಲ್ಲಮಂಜ ಅಶೋಕ್ ನಗರದ ನಿವಾಸಿ (45), ಶಿಕ್ಷೆಗೆ ಒಳಗಾದ ಆರೋಪಿಗಳಾಗಿದ್ದಾರೆ. ಈ ಪ್ರಕರಣದ ಮತ್ತೋರ್ವ ಆರೋಪಿಯಾದ ಅರಸೀಕೆರೆ ಬೆಳವತ್ತ ಹಳ್ಳಿಯ ನಿವಾಸಿ ಸೋಮೇಶ್ (50) ವಿಚಾರಣಾ ಸಮಯದಲ್ಲಿ ಮೃತಪಟ್ಟಿದ್ದರು.

2013ನೇ ಇಸವಿಯಲ್ಲಿ ಡಕಾಯಿತಿ ನಡೆಸಲು ಸಂಚು ಹೂಡಿದ್ದ ಆರೋಪಿಗಳನ್ನು ಮಾಹಿತಿಯ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣೆಯ ಅಂದಿನ ಎಸ್ಸೈ ಮಹೇಶ್ ಪ್ರಸಾದ್ ಹಾಗೂ ಅವರ ತಂಡ ದಸ್ತಗಿರಿ ಮಾಡಿತ್ತು. ಬಳಿಕ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಠಾಣೆ, ಬಂಟ್ವಾಳ ನಗರ ಠಾಣೆ (ಎರಡು ಪ್ರಕರಣ), ಬೆಳ್ತಂಗಡಿ ಠಾಣೆ, ಪುಂಜಾಲಕಟ್ಟೆ ಠಾಣೆ, ಸುಳ್ಯ ಠಾಣೆ ಹಾಗೂ ಉಡುಪಿ ಜಿಲ್ಲೆಯ ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಡಕಾಯಿತಿ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ

ಡಕಾಯಿತಿ ಪ್ರಕರಣಗಳಲ್ಲಿ ಕಳವುಗೈದ ಸುಮಾರು 20 ಲಕ್ಷ ರೂ. ಮೌಲ್ಯದ ಬೆಳ್ಳಿ ಹಾಗೂ ಇತರ ವಸ್ತುಗಳನ್ನು ಆರೋಪಿಗಳಿಂದ ವಶಕ್ಕೆ ಪಡೆದು ತನಿಖೆ ಪೂರೈಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪ ಸಾಬೀತಾಗಿದ್ದರಿಂದ ಆರೋಪಿಗಳಿಗೆ ಎರಡು ವರ್ಷ ಸಾದಾ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ

ವಿತರಣಾ ಸಮಯದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ನೇತ್ರಾ ಅವರನ್ನು ಬಂಟ್ವಾಳ ಗ್ರಾಮಾಂತರ ಠಾಣೆಯ ಕಾನ್ಸ್ಟೇಬಲ್ ಗಳಾದ ಮೋಹನ್ ವಿಶಾಲಾಕ್ಷಿ ಅವರು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here