ಬಂಟ್ವಾಳ: ಸಿದ್ದಕಟ್ಟೆ ಸ.ಪ್ರ.ದ. ಕಾಲೇಜು ವಿದ್ಯಾರ್ಥಿಗಳಿಗೆ ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಇಂಗ್ಲೀಷ್ ವಿಭಾಗದ ವತಿಯಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ಮೃದು ಕೌಶಲ ತರಬೇತಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮೃದು ಕೌಶಲ ತರಬೇತಿದಾರರು ಹಾಗೂ ಮೂಡಬಿದ್ರೆ ಎಕ್ಸಲೆಂಟ್ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ವಿಕ್ರಮ ನಾಯಕ ಕೆ. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಗೋಲ್ ಸೆಟ್ಟಿಂಗ್ ಹಾಗೂ ಟೈಮ್ ಮ್ಯಾನೇಜ್ಮೆಂಟ್ ಎಂಬ ವಿಷಯದ ಕುರಿತು ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಲು ನಾವು ನಮ್ಮ ಸಾಮರ್ಥ್ಯವನ್ನು ಅರಿತು ಸೂಕ್ತ ಗುರಿಯನ್ನು ನಿರ್ಧರಿಸಿಕೊಂಡು ಆ ನಿಟ್ಟಿನಲ್ಲಿ ಸಮಯವನ್ನು ಸರಿದೂಗಿಸಿ ಪ್ರಯತ್ನಿಸಬೇಕು ಎಂದರು. ತರಬೇತಿಯ ವಿಷಯವನ್ನು ವಿವಿಧ ದೃಷ್ಟಾಂತಗಳೊಂದಿಗೆ ವಿವರಿಸಿದ ಅವರು, ವಿದ್ಯಾರ್ಥಿಗಳಿಗೆ ಗುರಿಯನ್ನು ನಿರ್ಧರಿಸುವುದು ಹೇಗೆ ಮತ್ತು ಅದನ್ನು ತಲುಪುವಲ್ಲಿ ಪ್ರಯತ್ನಿಸುವುದು ಹೇಗೆ ಎಂಬುದನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲೆ ಸೌಮ್ಯ ಎಚ್. ಕೆ. ವಿದ್ಯಾರ್ಥಿ ಜೀವನ ಉತ್ತಮ ವಿಚಾರಗಳನ್ನು ಕಲಿಯಲು ಒಂದು ಸೂಕ್ತ ವೇದಿಕೆಯಾಗಿದೆ. ಈ ನಿಟ್ಟಿನಲ್ಲಿ ಕಾಲೇಜು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ವಿದ್ಯಾರ್ಥಿಗಳು ಸಿಕ್ಕ ಅವಕಾಶವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಬದುಕಿನ ಗುರಿಯನ್ನು ಗುರುತಿಸಿಕೊಂಡು, ಬೋಧಕರ ಮಾರ್ಗದರ್ಶನವನ್ನು ಪಡೆದು ಮುನ್ನಡೆಯಬೇಕು. ಆ ರೀತಿ ಪ್ರಯತ್ನಿಸಿದ ಎಲ್ಲರಿಗೂ ಯಶಸ್ಸು ಸಾಧ್ಯ ಎಂದರು.
ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ಆಂಗ್ಲ ವಿಭಾಗದ ಸಹಾಯಕ ಪ್ರಾಧ್ಯಾಪಕ ವಿನಯ್ ಎಂ.ಎಸ್. ಸ್ವಾಗತಿಸಿ, ಪ್ರಥಮ ಬಿ ಎ ವಿದ್ಯಾರ್ಥಿ ಕಿಶೋರ್ ವಂದಿಸಿದರು. ಪ್ರಥಮ ಬಿಕಾಂ ವಿದ್ಯಾರ್ಥಿನಿ ರಕ್ಷಾ ಪ್ರಾರ್ಥಿಸಿದರು. ಪ್ರಥಮ ಬಿಕಾಂ ವಿದ್ಯಾರ್ಥಿ ಪ್ರತೀಕ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.