ಬಂಟ್ವಾಳ: ಸಿದ್ಧಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಸರಕಾರ ಕಾಲೇಜು ಶಿಕ್ಷಣ ಇಲಾಖೆಯ ಮೂಲಕ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ಯೋಜನೆಯಡಿ ಲ್ಯಾಪ್‌ಟಾಪ್ ವಿತರಣಾ ಕಾರ್ಯಕ್ರಮ ಇಂದು ಕಾಲೇಜಿನ ಸಭಾಂಗಣದಲ್ಲಿ ಜರಗಿತು.
ದ.ಕ. ಜಿ.ಪಂ. ಸದಸ್ಯ ತುಂಗಪ್ಪ ಬಂಗೇರ ಕಾಲೇಜಿನ ಪ್ರಥಮ ಪದವಿಯ ಎಲ್ಲಾ 65 ಫಲಾನುಭವಿಗಳಲ್ಲಿ ಆಯ್ದ ಹತ್ತು ಮಂದಿಗೆ ಸಾಂಕೇತಿಕವಾಗಿ ಲ್ಯಾಪ್‌ಟಾಪ್ ವಿತರಿಸಿ, ಮಾತನಾಡಿ, ಪ್ರತಿಭೆಗೆ ಸೂಕ್ತ ಮನ್ನಣೆ ಸಿಗುವ ಕಾಲ ಇಂದು ಬಂದಿದೆ. ಪರಿಶ್ರಮವನ್ನು ಹಾಕಿ ಯಶಸ್ಸಿಗೆ ಶ್ರಮಿಸುವ ವಿದ್ಯಾರ್ಥಿಗಳ ಬೆನ್ನಿಗೆ ಇಂದಿನ ಸರಕಾರವಿದೆ. ಇಂದು ಸರಕಾರ ನೀಡುತ್ತಿರುವ ಲ್ಯಾಪ್‌ಟಾಪ್ ವಿದ್ಯಾರ್ಥಿಗಳಲ್ಲಿ ಅಗತ್ಯವಾದ ಕಂಪ್ಯೂಟರ್ ಕೌಶಲ್ಯವನ್ನು ರೂಢಿಸುವಲ್ಲಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುವಲ್ಲಿ ಸಹಕಾರಿಯಾಗಲಿದೆ. ಆದ್ದರಿಂದ ವಿದ್ಯಾರ್ಥಿಗಳು ಇದನ್ನೆಲ್ಲಾ ಸದುಪಯೋಗಪಡಿಸಿಕೊಂಡು ಒಳ್ಳೆಯ ಗುಣ ನಡತೆ ಬೆಳೆಸಿಕೊಂಡು ದೇಶದ ಸತ್ಪ್ರಜೆಗಳಾಗಬೇಕು. ಸರಕಾರ ಯಾವುದೇ ಬೇಧ ಭಾವವಿಲ್ಲದೆ ಎಲ್ಲರಿಗೂ ಲ್ಯಾಪ್‌ಟಾಪ್ ವಿತರಿಸಿರುವುದೇ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಗಬೆಟ್ಟು ಕ್ಷೇತ್ರದ ತಾ.ಪಂ. ಸದಸ್ಯ ಪ್ರಭಾಕರ ಪ್ರಭು ಮಾತನಾಡಿ, ಇಂದು ಸರಕಾರ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡುವ ಮೂಲಕ ಅಗತ್ಯವಾದ ಜ್ಞಾನವನ್ನು ವಿದ್ಯಾರ್ಥಿಗಳಲ್ಲಿ ಪಸರಿಸಲು ದಾರಿ ಮಾಡಿಕೊಟ್ಟಿದೆ. ಜ್ಞಾನ ಎಂಬುದು ಬೆಳೆಯುವಂತಹದ್ದು, ಅದು ಈ ಮೂಲಕ ವೃದ್ಧಿಸಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.
ಕಾಲೇಜಿನ ಗ್ರಂಥಪಾಲಕರಾದ ಡಾ.ಶ್ರೀನಿವಾಸ ಸ್ವಾಗತಿಸಿ, ದೇವಿಪ್ರಸಾದ್ ವಂದಿಸಿದರು. ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ನಸೀಮಾ ಬೇಗಂ ಕಾರ್ಯಕ್ರಮ ನಿರೂಪಿಸಿದರು. ತೃತೀಯ ಬಿಎ ವಿದ್ಯಾರ್ಥಿ ಮನೀಷ್ ಹಾಗೂ ಪ್ರಥಮ ಬಿಕಾಂ ನ ರಕ್ಷಾ ಪ್ರಾರ್ಥಿಸಿದರು. ಆಂಗ್ಲಭಾಷಾ ಸಹಾಯಕ ಪ್ರಾಧ್ಯಾಪಕ ವಿನಯ್ ಎಂ.ಎಸ್. ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಹನುಮಂತಯ್ಯ ಲ್ಯಾಪ್‌ಟಾಪ್ ವಿತರಣಾ ನಿರ್ವಹಣೆಯನ್ನು ಮಾಡಿದರು.
ಸಂಗಬೆಟ್ಟು ಕ್ಷೇತ್ರದ ಮಾಜಿ ತಾ.ಪಂ. ಸದಸ್ಯ ರತ್ನಕುಮಾರ್ ಚೌಟ, ಗ್ರಾ.ಪಂ. ಅಧ್ಯಕ್ಷೆ ಗುಲಾಬಿ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಪೂಜಾರಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ನಾರಾಯಣ ನಾಯ್ಕ್, ಕಾಲೇಜಿನ ಪ್ರಾಂಶುಪಾಲೆ ಸೌಮ್ಯ ಹೆಚ್.ಕೆ., ಕಾಲೇಜಿನ ಬೋಧಕ, ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿ ವೃಂದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.