


ಬಂಟ್ವಾಳ: ಸಿದ್ದಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಫೆ.13 ರಂದು ಆಂತರಿಕ ಗುಣಮಟ್ಟ ಭರವಸೆ ಕೋಶ ಆಶ್ರಯದಲ್ಲಿ ಮೈಂಡ್ ಮ್ಯಾಪಿಂಗ್ ಕುರಿತು ಒಂದು ದಿನದ ಅಂತರ್ ಕಾಲೇಜು ತರಬೇತಿ ಕಾರ್ಯಕ್ರಮ ನಡೆಯಿತು.
ಸಂಗಬೆಟ್ಟು ಗ್ರಾ.ಪಂ.ನ ಅಧ್ಯಕ್ಷೆ ಗುಲಾಬಿ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ, ಶುಭ ಹಾರೈಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರು ಪಿ.ಎ. ಕಾಲೇಜಿನ ಶೈಕ್ಷಣಿಕ ವಿಭಾಗದ ನಿರ್ದೇಶಕ ಡಾ. ಸರ್ಫರಾಜ್ ಜೆ. ಹಾಸಿಮ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಜೀವನ ಪೂರ್ಣಗೊಳ್ಳುವುದು ದೇಹದಿಂದ ಮಾತ್ರವಲ್ಲ ಮನಸ್ಸಿನ ನಿಯಂತ್ರಣವು ಅಗತ್ಯವಾಗಿದೆ. ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡು ದೃಢತೆ, ಆತ್ಮವಿಶ್ವಾಸ ಹಾಗೂ ಉತ್ತಮ ಗುರಿಗಳೊಂದಿಗೆ ಯಶಸ್ಸು ಸಾಧಿಸಲು ತಿಳಿಸಿದರು. ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳ ಮೂಲಕ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿ, ವಿಧ್ಯಾರ್ಜನೆಯಲ್ಲಿ ಏಕಾಗ್ರತೆ ಸಾಧಿಸುವ ವಿಧಾನವನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಸೌಮ್ಯ ಹೆಚ್. ಕೆ. ಅವರು ಮಾತನಾಡಿ, ವಿದ್ಯಾರ್ಥಿಗಳು ಮನಸ್ಸು ದೇಹಗಳ ನಡುವೆ ಸಮತೋಲನ ಸಾಧಿಸಿ ಮನಸ್ಸಿಗೆ ಪೂರಕವಾದ ಧನಾತ್ಮಕ ಹಾಗೂ ಸದ್ವಿಚಾರಗಳನ್ನು ಮಾತ್ರ ಒದಗಿಸುವಂತೆ ಹೇಳಿದರು. ವಿದ್ಯಾರ್ಥಿ ಜೀವನದಲ್ಲಿ ಅನಾವಶ್ಯಕ ಆಕರ್ಷಣೆಗಳಿಗೆ ಬಲಿಯಾಗದೆ ಸಕಾರಾತ್ಮಕ ಹಾಗೂ ಸದ್ವಿಚಾರಗಳನ್ನು ಮನಸ್ಸಿಗೆ ಒದಗಿಸುವಂತೆ ಹೇಳಿದರು.
ವಾಣಿಜ್ಯಶಾಸ್ತ್ರ ಉಪನ್ಯಾಸಕ ಶ್ರೀದೇವಿ ಪ್ರಸಾದ್ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ನಸೀಮಾ ಬೇಗಂ ಸ್ವಾಗತಿಸಿ, ಐಕ್ಯೂಎಸಿ ಸಂಚಾಲಕ ವಿನಯ ಎಂ.ಎಸ್. ವಂದಿಸಿದರು. ದ್ವಿತೀಯ ಬಿ.ಕಾಂ. ವಿದ್ಯಾರ್ಥಿ ಪ್ರಜ್ವಲ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.


