ಬಂಟ್ವಾಳ: ಶ್ರೀ ಉಳ್ಳಾಲ್ತಿ, ನಡಿಯೇಲ್ ದೈಯ್ಯಂಗುಲು, ನಾಲ್ಕೈತ್ತಾಯ ಮತ್ತು ಪರಿವಾರ ದೈವಗಳ ಸಜೀಪಮಾಗಣೆ ಸಂಕೇಶ ಭಂಡಾರದ ಮನೆಯ ಸುತ್ತು ಗೋಪುರದ ಪುನರ್ ನಿರ್ಮಾಣ ಕಾರ್ಯವು ಸುಮಾರು ೧ ಕೋ.ರೂ.ಗಳಲ್ಲಿ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ, ದ.ಕ.ಜಿ.ಪಂ.ಮಾಜಿ ಅಧ್ಯಕ್ಷ ಬಿ.ಸದಾನಂದ ಪೂಂಜ ತಿಳಿಸಿದರು.

ಅವರು ಬುಧವಾರ ಸಜೀಪಮಾಗಣೆ ಭಂಡಾರದ ಮನೆಯ ಆವರಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಸಜೀಪಮಾಗಣೆಯ ಉಳ್ಳಾಲ್ತಿ ಕ್ಷೇತ್ರವು ವೈಶಿಷ್ಟ್ಯಮಯ ಸಂಪ್ರದಾಯ ಗಳೊಂದಿಗೆ ಆರಾಧಿಸಿಕೊಂಡು ಬರುತ್ತಿರುವ ವಿಶೇಷ ಪರಂಪರೆಯನ್ನು ಹೊಂದಿದ್ದು, ಮಾಗಣೆಯ ಪ್ರಥಮ ಉತ್ಸವ ಪುದ್ದಾರ್ ಮೆಚ್ಚಿ ಜಾತ್ರೆ ಜಿಲ್ಲೆಯಲ್ಲೇ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಸುಮಾರು ೧೦೦ ಬಗೆಯ ತರಕಾರಿ ಸೇರಿಸಿ ಹೊಸ ಅಕ್ಕಿ ಊಟ ವಿಶೇಷತೆಯನ್ನು ಹೊಂದಿದೆ.
ಮಾಗಣೆಯಲ್ಲಿ ಕಟ್ಟು ಪ್ರಕಾರ ಯಾವುದೇ ಕ್ಷೇತ್ರದಲ್ಲಿ ವಾರ್ಷಿಕವಾಗಿ ನೇಮೋತ್ಸವಕ್ಕೆ ಬೇರೆ ಬೇರೆ ಕಡೆಯಿಂದ ಭಂಡಾರ ಬಂದು ಬಳಿಕ ಕಿರುವಾಳು ಹೊರಡುವುದು ಕ್ಷೇತ್ರದ ಪುರಾತನ ಪರಂಪರೆಯಾಗಿದೆ. ಇಂತಹ ಭಂಡಾರದ ಮನೆ ಸ್ಥಳಾವಕಾಶದ ಕೊರತೆಯಿಂದ ಹಿಂದಿನ ಸುತ್ತು ಗೋಪುರ ತೆಗೆದು ಹೊರಭಾಗದಲ್ಲಿ ಸುಮಾರು ೧ ಕೋ.ರೂ.ವೆಚ್ಚದಲ್ಲಿ ಸುತ್ತುಗೋಪುರ ನಿರ್ಮಿಸುವ ಯೋಜನೆ ಇದ್ದು, ಈಗಾಗಲೇ ೪೫ ಲಕ್ಷ ರೂ.ಗಳ ಕಾಮಗಾರಿ ಪೂರ್ಣಗೊಂಡಿದೆ. ಎಪ್ರಿಲ್-ಮೇಯೊಳಗೆ ಕಾಮಗಾರಿ ಮುಗಿಸುವ ಯೋಚನೆ ಇದೆ. ಈ ಕಾರ್ಯಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ೩ ಲಕ್ಷ ರೂ.ಗಳ ನೆರವನ್ನು ನೀಡಿದ್ದಾರೆ ಎಂದು ತಿಳಿಸಿದರು.
ತುಳುನಾಡಿನಲ್ಲಿ ದೈವಾರಾಧನೆಯು ಶಕ್ತಿ-ಭಕ್ತಿಯ ಸಂಕೇತವಾಗಿದ್ದು, ಅದರಲ್ಲಿ ಸುಧಾರಣೆಯ ತರುವ ನಿಟ್ಟಿನಲ್ಲಿ ಪ್ರಸ್ತುತ ನಿರ್ಮಾಣವಾಗುತ್ತಿರುವ ಸುತ್ತು ಗೋಪುರದ ತಳಭಾಗದಲ್ಲಿ ದೈವಾರಾಧನೆಯ ಸಂಶೋಧನಾ ಕೇಂದ್ರವನ್ನು ಆರಂಭಿಸುವ ಯೋಚನೆ ಇದೆ. ನೀಲೇಶ್ವರ ಕೆ.ಯು.ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಿಂದ ಹಿರಿಯರನ್ನು ಸೇರಿಸಿಕೊಂಡು ಈ ಕೇಂದ್ರ ಕಾರ್ಯಾಚರಿಸಲಿದೆ ಎಂದು ಬಿ.ಸದಾನಂದ ಪೂಂಜ ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಗಣೆಯ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್, ಸಮಿತಿ ಕಾರ್ಯಾಧ್ಯಕ್ಷ ಶ್ರೀಕಾಂತ್ ಶೆಟ್ಟಿ, ಗಡಿಪ್ರಧಾನರಾದ ಗಣೇಶ್ ನಾಯಕ್ ಯಾನೆ ಉಗ್ಗ ಶೆಟ್ಟಿ, ಮುಂಡಪ್ಪ ಶೆಟ್ಟಿ ಯಾನೆ ಕೋಚು ಭಂಡಾರಿ, ಬಿಜಂದಾಡಿಗುತ್ತು ಶಿವರಾಮ ಭಂಡಾರಿ, ಮಾಡಂತಾಡಿಗುತ್ತು ಯಶೋಧರ ರೈ, ನಗ್ರಿಗುತ್ತು ಜಯರಾಮ ಶೆಟ್ಟಿ, ಅಂಕದಕೋಡಿ ಬಾಳಿಕೆ ಆನಂದ ರೈ, ನಟ್ಟಿಲ್ ವೆಂಕಪ್ಪ ಪೂಜಾರಿ, ದೇವಿಪ್ರಸಾದ್ ಪೂಂಜ, ಜೀವನ್ ಆಳ್ವ ಮೊದಲಾದವರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here