ಬಂಟ್ವಾಳ : ಪ್ರತಿ ಬಾರಿ 650-700 ರೂಪಾಯಿಗಳಿಗೆ ಏಲಂ ಆಗುತ್ತಿದ್ದ ಸಜೀಪಮೂಡ ಗ್ರಾಮ ಪಂಚಾಯತಿಯ ಬೊಳ್ಳಾಯಿ ಮೀನು ಮಾರುಕಟ್ಟೆಯು ಗುರುವಾರ ಪಂಚಾಯತ್‌ನಲ್ಲಿ ನಡೆದ ಏಲಂ ಪ್ರಕ್ರಿಯೆಯಲ್ಲಿ 49,900 ರೂ.ಗಳಿಗೆ ಏಲಂ ಆಗುವ ಮೂಲಕ ದಾಖಲೆ ನಿರ್ಮಿಸಿದೆ.
ಗುರುವಾರ ಗ್ರಾಮ ಪಂಚಾಯತಿಯ ಏಳು ಅಂಗಡಿ ಕೋಣೆಗಳು ಹಾಗೂ ಒಂದು ಮೀನು ಮಾರುಕಟ್ಟೆಯ ಏಲಂ ಪ್ರಕ್ರಿಯೆ ನಿಗದಿಯಾಗಿದ್ದು, ಸಾಕಷ್ಟು ಏಲಂನಲ್ಲಿ ಪಡೆಯುವುದಕ್ಕೆ ಜಿದ್ದಾಜಿದ್ದಿ ನಡೆದಿತ್ತು. ಮೀನು ಮಾರುಕಟ್ಟೆಗೆ ಏಲಂ ಮೊತ್ತ ಏರುತ್ತಲೇ ಹೋಗಿ ವಾರ್ಷಿಕ 49,900 ರೂ.ಗಳಿಗೆ ಮೂರು ವರ್ಷಕ್ಕೆ ಏಲಂ ಆಯಿತು.
ಕೊಳಕೆ ಭಾಗದ ಅಂಗಡಿ ಕೋಣೆಗಳು ಸಾಮಾನ್ಯ ದರಕ್ಕೆ ಏಲಂ ಆದರೆ, ಬೊಳ್ಳಾಯಿ ಭಾಗದ ಒಂದು ಅಂಗಡಿ ಕೋಣೆ 7000 ರೂ.ಗಳಿಗೆ ಏಲಂ ಆಗುವ ಮೂಲಕ ಆಶ್ಚರ್ಯ ಮೂಡಿಸಿದೆ.