ಬಂಟ್ವಾಳ: ಶಿವರಾತ್ರಿಯ ಪರಿಕಲ್ಪನೆ ನಿಜಾರ್ಥದಲ್ಲಿ ಸಾಕ್ಷಾತ್ಕಾರಗೊಂಡ ಸನ್ನಿವೇಶವದು. ಮಧ್ಯರಾತ್ರಿಯಾದರೂ ಆ ಸ್ಮಶಾನದಲ್ಲಿ ಯಾರ ಮೊಗದಲ್ಲೂ ಭಯವೆಂಬುದಿಲ್ಲ.. ಎಲ್ಲೆಡೆಯೂ ಭಕ್ತಿಯ ಪರಾಕಾಷ್ಠೆ…
ಈ ಸನ್ನಿವೇಶ ಕಂಡು ಬಂದದ್ದು ಸಜಿಪನಡು ಕಂಚಿನಡ್ಕ ಪದವಿನಲ್ಲಿ. ಶಿವರಾತ್ರಿಯ ದಿನವಾದ ಶುಕ್ರವಾರ ಸಂಜೆ 6 ರಿಂದ ಶಿವ ಧ್ಯಾನದ ಪುಣ್ಯಕಾರ್ಯ ಮಧ್ಯರಾತ್ರಿ ತನಕವೂ ವಿವಿಧ ಭಜನಾತಂಡಗಳ ಭಜನೆಯ ಜೊತೆಗೆ ಸಂಪನ್ನ ಗೊಂಡಿತು.
ಪುರುಷ-ಮಹಿಳೆ ಎಂಬ ಬೇಧಭಾವ ವಿಲ್ಲದೆ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗಿನ ಎಲ್ಲರೂ ಶಿವಧ್ಯಾನದಲ್ಲಿ ತೊಡಗಿದ್ದ ಅಪೂರ್ವ ಸನ್ನಿವೇಶ ಅಲ್ಲಿ ನಿರ್ಮಾಣಗೊಂಡಿತ್ತು. ಸಜಿಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿರುವ ರುದ್ರಭೂಮಿ ದೇವಭೂಮಿಯಲ್ಲಿ ಹಿಂದೂ ರುಧ್ರಭೂಮಿ ಸಮಿತಿ ಹಾಗೂ ಹಿಂದೂ ರುಧ್ರಭೂಮಿ ಅಭಿವೃದ್ದಿ ಸಮಿತಿ ಮಹಾಶಿವರಾತ್ರಿಯ ಅಂಗವಾಗಿ ಆಯೋಜಿಸಿದ್ದ ವಿಶಿಷ್ಟ ಮತ್ತು ಅಪರೂಪದ ಕಾರ್ಯಕ್ರಮ ಅರ್ಥಪೂರ್ಣವಾಗಿ ಮೂಡಿಬಂತು. ಸಾಮಾನ್ಯವಾಗಿ ರುದ್ರಭೂಮಿಯಲ್ಲಿ ಭಜನಾ ಕಾರ್ಯಕ್ರಮ ನಡೆಯುವುದೇ ಅದು ವಿಶೇಷ. ಅದರಲ್ಲೂ ರುದ್ರಭೂಮಿಗೆ ಜನರು ಬರುವುದೇ ವಿರಳ. ಅಂತಹ ಸ್ಥಳದಲ್ಲಿ ರಾತ್ರಿ ಹೊತ್ತಿನಲ್ಲಿ ಶಿವನ ಪ್ರತಿಮೆಯ ಬಳಿ ಕರ್ಪೂರದ ಆರತಿ ಬೆಳಗಿ, ಬಿಲ್ವಾರ್ಚನೆಗೈದು ಪ್ರಾರ್ಥನೆ ಸಲ್ಲಿಸುವ ಅಭೂತಪೂರ್ವ ಕ್ಷಣ ಇಲ್ಲಿತ್ತು.
ರುದ್ರಭೂಮಿ ಮನುಷ್ಯನ ಮೋಕ್ಷ ಸ್ಥಳ, ಇಂತಹ ಪವಿತ್ರ ಸ್ಥಳದ ಶಿವನ ಸಾನಿಧ್ಯವೂ ಹೌದು, ಇದರ ಬಗ್ಗೆ ಭಯಬೇಡ ಎಂಬ ಸಾಮಾಜಿಕ ಜಾಗೃತಿಯ ಕಾರಣಕ್ಕೆ ಶಿವರಾತ್ರಿಯಂದು ಭಜನೆಯ ಮೂಲಕ ಶಿವಾರಾಧನೆ ನಡೆಸಲಾಗುತ್ತಿದೆ ಎಂದು ಹಿಂದೂ ರುದ್ರಭೂಮಿ ಸಮಿತಿಯ ಅಧ್ಯಕ್ಷ ಯಶವಂತ ದೇರಾಜೆ ತಿಳಿಸಿದ್ದಾರೆ. ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವದಾಸ ಅಡಪ ಮತ್ತು ಉಭಯ ಸಮಿತಿಗಳ ಸದಸ್ಯರು, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು. ಮಧ್ಯರಾತ್ರಿವರೆಗೂ ನಡೆದ ಭಜನಾ ಸಂಕೀರ್ತನೆಯಲ್ಲಿ ಸುಮಾರು 10ಕ್ಕೂ ಅಧಿಕ ಭಜನಾ ತಂಡಗಳು ಭಾಗವಹಿಸಿ ಶಿವರಾತ್ರಿಯನ್ನು ಅರ್ಥಪೂರ್ಣವಾಗಿಸಿತು. ಮಧ್ಯರಾತ್ರಿವರೆಗೂ ಸಾಲುಸಾಲಾಗಿ ಭಕ್ತಾಧಿಗಳು ಆಗಮಿಸುತ್ತಿದ್ದುದು ವಿಶೇಷವಾಗಿತ್ತು. ಆಗಮಿಸಿದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.