Sunday, October 22, 2023

ಸತ್ತವರು ಕೋರ್ಟಿಗೆ ಹೋಗಿರುವುದು ಇತಿಹಾಸದಲ್ಲಿ ಪ್ರಥಮ: ಮಾಜಿ‌ ಸಚಿವ ಬಿ.ರಮಾನಾಥ ರೈ ಆರೋಪ

Must read

ಬಂಟ್ವಾಳ:ತಾಲೂಕಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿಯಮಿತದ (ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್) ನೂತನ ಆಡಳಿತ ಮಂಡಳಿಯ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ರಾಜ್ಯ ಹೈಕೋಟ್೯ ತಡೆಯಾಜ್ಙೆ ನೀಡಿದೆ ಎಂದು ಭೂ ಬ್ಯಾಂಕ್ ಮಾಜಿ ಅಧ್ಯಕ್ಷ ಸುದರ್ಶನ್ ಜೈನ್ ಹೇಳಿದರು.
ಅವರು ಬಿಸಿರೋಡಿನ ಕಾಂಗ್ರೇಸ್ ಪಕ್ಷದ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಬುಧವಾರ(ಫೆ.5) ದಂದು ಬ್ಯಾಂಕಿನ ಆಡಳಿತ ಮಂಡಳಿಯ ನೂತನ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಗೆ ಚುನಾವಣಾಧಿಕಾರಿಗಳು ದಿನ ನಿಗದಿಪಡಿಸಿದ್ದರು. ಬ್ಯಾಂಕಿನ ನಿರ್ದೇಶಕ ಸ್ಥಾನಗಳಿಗೆ ಜ.25 ರಂದು ನಡೆದ ಚುನಾವಣೆಯಲ್ಲಿ ಬ್ಯಾಂಕಿನ ಮರಣ ಹೊಂದಿರುವ ಸದಸ್ಯರು,ಸಾಲ ಸುಸ್ತಿದಾರರು,ಅನರ್ಹರ ಹೆಸರಿನಲ್ಲಿ ಮತದಾನ ಮಾಡಲಾಗಿದೆ ಎಂದು ಅಪಾದಿಸಿ ಬ್ಯಾಂಕಿನ ನಿಕಟಪೂರ್ವ ಅಧ್ಯಕ್ಷ ಸುದರ್ಶನ್ ಜೈನ್ ಅವರು ಹೈಕೋಟ್೯ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಈ ತಕರಾರು ಅರ್ಜಿಯ ವಿಚಾರಣೆ ನಡೆಸಿದ ಹೈಕೋಟ್೯ ಫೆ.5 ರಂದು ಬ್ಯಾಂಕಿನ ಆಡಳಿತ ಮಂಡಳಿಯ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ದಾವೆಯ ಮುಂದಿನ ವಿಚಾರಣಾ ದಿನದವರೆಗೆ ತಡೆಯಾಜ್ಙೆ ನೀಡಿ ಆದೇಶಿಸಿದೆ. ಜ.25 ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ನ 13ರ ಪೈಕಿ 12 ಮಂದಿ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಈ ಸಂದರ್ಭದಲ್ಲು ಮತದಾರರ ಪಟ್ಟಿಗೆ ಸಂಬಂಧಿಸಿ ಗೊಂದಲವುಂಟಾಗಿ ಬಿಜೆಪಿ ಮತ್ರು ಕಾಂಗ್ರೆಸ್ ಪಕ್ಷದ ಬೆಂಬಲಿತ ನಾಯಕರೊಳಗೆ ರಂಪಾಟ ನಡೆದ ಹಿನ್ಬಲೆಯಲ್ಲಿ ಒಂದು ತಾಸುಗಳ ಕಾಲ ಮತದಾನವೇ ಸ್ಥಗಿತಗೊಂಡಿತ್ತಲ್ಲದೆ ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡಿತ್ತು. ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ 7 ಸ್ಥಾನ ಪಡೆದಿತ್ತು.ಕಾಂಗ್ರೆಸ್ 5 ಸ್ಥಾನ ಗಳಿಸಿತ್ತು, 40 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಬಂಟ್ಚಾಳ ಭೂ ಅಭಿವೃದ್ಧಿ ಬ್ಯಾಂಕ್ ನ ಆಡಳಿತ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ತೆಕ್ಕೆಗೆ ಬಂದಿತ್ತು.

ವ್ಯವಸ್ಥೆಗೆ ಕಡಿವಾಣ: ಅರ್ಹತೆ ಇಲ್ಲದವರಿಗೂ ಮತನೀಡುವ ಅವಕಾಶ ನೀಡಿದ್ದು ನ್ಯಾಯವಲ್ಲ. ಅರ್ಹತೆ ಇರುವವರಿಗೆ ಮಾತ್ರ ಮತ ಹಾಕುವ ವ್ಯವಸ್ಥೆ ಅಗಬೇಕಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅವರು ತಿಳಿಸಿದ್ದಾರೆ.
ಸತ್ತ ವರು, ರಸ್ತೆಯಲ್ಲಿ ಹೋಗುವವರು ಮತಹಾಕಿದ್ದಾರೆ, ಸದಸ್ಯರಲ್ಲದವರು ಬೋಗಸ್ ಮತಹಾಕಿದ್ದಾರೆ, ಇಂತಹ ವ್ಯವಸ್ಥೆಗಳು ನಿಲ್ಲಬೇಕು ಎಂಬ ದೃಷ್ಟಿಯಿಂದ ಕೋರ್ಟು ಮೂಲಕ ನಾವು ತಡೆ ತಂದಿದ್ದೇವೆ . ರಾಜ್ಯದಲ್ಲಿ ಇಂತಹ ವ್ಯವಸ್ಥೆ ಗಳಿಗೆ ಕಡಿವಾಣ ಬಿದ್ದು ಸಹಕಾರಿ ಸಂಸ್ಥೆಗಳು ಉಳಿಯುವ ವಿಶ್ವಾಸವಿದೆ ಎಂದು ಅವರು ಹೇಳಿದರು.
ಅಧಿಕಾರ ದುರುಪಯೋಗ ಮಾಡಿಕೊಂಡು ಚುನಾವಣೆ ನಡೆಸಿದ್ದಾರೆ ಎಂದು ರೈ ಹೇಳಿದರು.
ಅನೇಕ ವರ್ಷ ಶಾಸಕನಾಗಿ ಮಂತ್ರಿಯಾಗಿ ಕೆಲಸ ಮಾಡಿದವನು ಈ ಸಂದರ್ಭದಲ್ಲಿ ನಾನು ಒಂದೇ ಒಂದು ಸಾರಿ ಸಹಕಾರಿ ಸಂಘಗಳ ಚುನಾವಣೆ ಯಲ್ಲಿ ಮೂಗು ತೂರಿಸಿಲ್ಲ ಎಂದು ಅವರು ಹೇಳಿದರು. ಸತ್ತವರು ಕೋರ್ಟಿಗೆ ಹೋಗಿದ್ದಾರೆ, ಇತಿಹಾಸದಲ್ಲಿ ಪ್ರಥಮ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪದ್ಮಶೇಖರ್ ಜೈನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಶೆಟ್ಟಿ, ಪಕ್ಷದ ಪ್ರಮುಖರಾದ ಪರಮೇಶ್ವರ ಮೂಲ್ಯ, ಶಿವಪ್ಪ ಪೂಜಾರಿ, ಸುಭಾಶ್ಚಂದ್ರ ಜೈನ್ ಮತ್ತಿತರರು ಉಪಸ್ಥಿತರಿದ್ದರು.

More articles

Latest article