


ಕರೆವ ಕಣ್ಣಲಿ ಅರಳು ಭಾವವು
ಮುಗಿಲನೇರಿ ನಗುತಿದೆ
ತೆರೆದ ಹೃದಯಕೆ ಸ್ನಿಗ್ಧ ಸೊಬಗನು
ತೂರಿ ತೂರಿ ತರುತಿದೆ
ಬಣ್ಣದೋಕುಳಿ ಚೆಲ್ಲಿ ರಭಸದಿ
ತೂಗು ಮಂಚವನೇರಿದೆ
ಕೊರಳು ಕೊಂಕಿಸಿ ನಲಿವ ನವಿಲಿಗೆ
ಕಣಿವೆ ಸಾಲನು ತೋರಿದೆ
ಬಿಡದೆ ಕಾಡುವ ತುಮುಲದೋಟಕೆ
ಒಲವ ಸೆರಗನು ಹಾಸಿದೆ
ಇರುಳ ಗಲ್ಲಕೆ ಬೆರಳ ತಾಗಿಸಿ
ಮಿಲನ ಗಾಳಿಯ ಬೀಸಿದೆ
ಏರು ಇಳಿವಿನ ತೆರೆಯ ರಭಸಕೆ
ನಕ್ಕು ನಲಿದಿದೆ ಮೈಮನ
ಹಗಲು ಚುಂಬಿಸಿ ಸರಿದ ಕತ್ತಲೆ
ಸೇರಿಕೊಂಡಿದೆ ಹೂಬನ
✍ ನೀ.ಶ್ರೀಶೈಲ ಹುಲ್ಲೂರು


