ವಿಟ್ಲ: ಧರ್ಮದ ಪಥದಲ್ಲಿ ಬದುಕಿನ ರಥ ಸಾಗಿದಾಗ ಉನ್ನತ ಸ್ಥಾನವನ್ನು ಪಡೆಯಬಹುದು. ಬದುಕು ಸಮತೋಲನದಲ್ಲಿದ್ದಾಗ ಮಾತ್ರ ಸುಂದರವಾಗುವುದು. ಕೃಷಿ ಸಂಸ್ಕೃತಿ ಋಷಿ ಸಂಸ್ಕೃತಿ ಸಮಾನವಾಗಿ ಸಾಗಬೇಕು. ಆತ್ಮೋನ್ನತಿಯ ಕಡೆಗೆ ನಾವು ನಮ್ಮ ರಥವನ್ನು ಎಳೆಯಬೇಕಾಗಿದೆ. ನಮ್ಮ ಸಂಸ್ಕೃತಿಯನ್ನು ಉಳಿಸಿದಾಗ ಭಾರತದ ರಥ ಎಳೆಯುವ ಕಾರ್ಯವಾಗುವುದು ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಮಂಗಳವಾರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ವತಿಯಿಂದ ನಡೆಯುತ್ತಿರುವ ಶ್ರೀ ಒಡಿಯೂರು ರಥೋತ್ಸವ- ತುಳುನಾಡ ಜಾತ್ರೆ ಪ್ರಯುಕ್ತ ನಡೆದ ಒಡಿಯೂರು ರಥೋತ್ಸವದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು.
ಶ್ರೀ ಸಂಸ್ಥಾನದ ಸಾಧ್ವೀ ಮಾತಾನಂದ ಮಯೀ ಆಶೀರ್ವಚನ ನೀಡಿ ಸತ್ಕಾರ್ಯಗಳ ಮೂಲಕ ನಮ್ಮ ಶರೀರವನ್ನು ಸವೆಸಬೇಕು. ಆತ್ಮಶಕ್ತಿ ಉದ್ದೀಪನ ಮಾಡುವ ಉದ್ದೇಶವನ್ನಿಟ್ಟುಕೊಂಡು ಶ್ರೀ ಸಂಸ್ಥಾನದಲ್ಲಿ ಮಾನವೀಯತೆಗೆ ಪೂರಕವಾದ ಕಾರ್ಯಗಳು ನಡೆಯುತ್ತಿದೆ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಮಾತನಾಡಿ ಒಡಿಯೂರು ಶ್ರೀ ಸಂಸ್ಥಾನದ ಮೂಲಕ ನಿಜ ಅರ್ಥದ ಗ್ರಾಮ ವಿಕಾಸ ನಡೆದಿದೆ. ಒಡಿಯೂರುಶ್ರೀ ಆಶಯದಂತೆ ತುಳುಭಾಷೆಗೆ ಮಾನ್ಯತೆ ದೊರಕಿಸಿಕೊಡುವ ಪ್ರಯತ್ನಕ್ಕೆ ನಾವೆಲ್ಲರೂ ಸಹಭಾಗಿಗಳಾಬೇಕು ಎಂದರು.
ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ ತುಳುನಾಡಿನ ಸಂಸ್ಕೃತಿ ಜಗತ್ತಿನಲ್ಲಿಯೇ ವಿಶಿಷ್ಟ ಸ್ಥಾನ ಪಡೆದಿದೆ. ಭಾರತೀಯತೆಯನ್ನು ಜಗತ್ತಿನೆಲ್ಲೆಡೆ ಗುರುತಿಸುತ್ತಿರುವುದು ದೇಶದ ಹೆಮ್ಮೆಯಾಗಿದೆ. ತುಳುನಾಡಿನ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಒಡಿಯೂರು ಸಂಸ್ಥಾನ ವಿಶೇಷ ಮುತುವರ್ಜಿ ವಹಿಸಿದೆ ಎಂದರು.
ಮಂಗಳೂರು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ ಮಾತನಾಡಿ ಸರಕಾರ ಮಾಡುವ ಕೆಲಸ ಮಾಡುವ ಕಾರ್ಯ ಮಠಮಂದಿರಗಳು ನಡೆಸಿದಾಗ ಅರ್ಥಪೂರ್ಣವಾಗುತ್ತದೆ. ದೇವರು ದೇಶ, ಧರ್ಮವನ್ನು ಜೀವನ ಪದ್ಧತಿಯನ್ನಾಗಿ ಸ್ವೀಕರಿಸಿದ ಜಗತ್ತಿನ ಏಕೈಕ ದೇಶ ಭಾರತವಾಗಿದೆ ಎಂದರು.
ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ, ಹೈಟೆಕ್ ಇಲೆಕ್ಟ್ರಿಫಿಕೇಶನ್ ಎಂಜಿನಿಯರಿಂಗ್‌ನ ಆಡಳಿತ ನಿರ್ದೇಶಕ ರವಿನಾಥ್ ವಿ. ಶೆಟ್ಟಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಸುರೇಶ್ ರೈ, ಉದ್ಯಮಿ ವಾಮಯ್ಯ ಬಿ ಶೆಟ್ಟಿ ಮುಂಬೈ, ರೇವತಿ ವಾಮಯ್ಯ ಶೆಟ್ಟಿ, ಒಡಿಯೂರು ಗುರುದೇವ ಸೇವಾ ಬಳಗದ ಅಧ್ಯಕ್ಷ ಎ. ಅಶೋಕ್ ಬಿಜೈ, ಉದ್ಯಮಿ ಕೃಷ್ಣ ಎಲ್. ಶೆಟ್ಟಿ, ಬರೋಡ ತುಳುಕೂಟದ ಅಧ್ಯಕ್ಷ ಶಶಿಧರ್ ಶೆಟ್ಟಿ ಬರೋಡ, ಅಂಕ್ಲೇಶ್ವರ ತುಳುಕೂಟದ ಅಧ್ಯಕ್ಷ ಶಂಕರ್ ಶೆಟ್ಟಿ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಸರ್ವಾಣಿ ಪಿ. ಶೆಟ್ಟಿ, ಗ್ರಾಮ ವಿಕಾಸ ಯೋಜನೆ ವಿವಿಧ ಘಟಕಗಳ ಅಧ್ಯಕ್ಷರು ಉಪಸ್ಥಿತರಿದ್ದರು.
ಯಶವಂತ ವಿಟ್ಲ ಸ್ವಾಗತಿಸಿದರು. ಚಂದ್ರಶೇಖರ ಉಪಾಧ್ಯಾಯ ಬಳಗ ಪ್ರಾರ್ಥಿಸಿದರು. ನಿತ್ಯಾಶ್ರೀ ಆಶಯಗೀತೆ ಹಾಡಿದರು. ಪ್ರಕಾಶ್ ಶೆಟ್ಟಿ ಪೇಟೆಮನೆ ನಿರೂಪಿಸಿದರು. ಒಡಿಯೂರು ಶ್ರೀ ಗುರುದೇವ ವಿದ್ಯಾಸಂಸ್ಥೆ ಸಂಚಾಲಕ ಸೇರಾಜೆ ಗಣಪತಿ ವಂದಿಸಿದರು.
ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟು ಪಟ್ಲಗುತ್ತು ಅನೀಶ್ ಶೆಟ್ಟಿ ಬೆಂಗಳೂರು ಅವರಿಗೆ ಶ್ರೀ ಗುರುದೇವಾನುಗ್ರಹ ಪುರಸ್ಕಾರ ನೀಡಲಾಯಿತು.

ಬೆಳಗ್ಗೆ ವೇ.ಮೂ.ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಸಾರ್ವಜನಿಕ ಸತ್ಯ ನಾರಾಯಣ ಪೂಜೆ, ಮಧ್ಯಾಹ್ನ ಮಹಾಪೂಜೆ, ಮಹಾಮಂಗಳಾರತಿ, ಮಹಾಸಂತರ್ಪಣೆ ನಡೆಯಿತು. ಕುಂಬಳೆ ನಾಟ್ಯ ವಿದ್ಯಾನಿಲಯ ವಿದುಷಿ ವಿದ್ಯಾಲಕ್ಷ್ಮೀ ಅವರ ಶಿಷ್ಯವೃಂದ ದವರಿಂದ ನೃತ್ಯ ಸಂಭ್ರಮ ನಡೆಯಿತು. ಗುರುದೇವ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here