ಬಂಟ್ವಾಳ: ಸ್ವಾಭಿಮಾನದ ಸಂಕೇತವಾಗಿ ಮೂಡಿ ಬಂದ, ದಾರ್ಶನಿಕ ಸಂಸ್ಥೆಯಾಗಿ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಶಿಕ್ಷಣ ನೀಡುವ ವಿದ್ಯಾದೇಗುಲವಾಗಿದೆ ಎಂದು ಕಲಾವಿದೆ, ಯುವ ನ್ಯಾಯವಾದಿ, ಸಾಮಾಜಿಕ ಕಾರ್ಯಕರ್ತೆ ಮಾಳವಿಕ ಅವಿನಾಶ್ ಹೇಳಿದರು.
ಅವರು ಕಲ್ಲಡ್ಕ ಶ್ರೀ ರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ ವೇದವ್ಯಾಸ ಸಭಾಭವನದಲ್ಲಿ ಫೆ.17 ರಂದು ಸೋಮವಾರ “ಸಶಕ್ತ ಭಾರತಕ್ಕೆ ಸದೃಢ ಹೆಜ್ಜೆಗಳು” ಎಂಬ ವಿಷಯದಲ್ಲಿ ನಡೆದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಇಲ್ಲಿನ ವಿದ್ಯಾರ್ಥಿಗಳಿಂದ ನವಭಾರತದ ಪುನರ್ ನಿರ್ಮಾಣದ ಕಾರ್ಯದಲ್ಲಿ ನಿಮ್ಮ ಪಾತ್ರ ಇರಲಿ. ಸಂಶೋಧಕರಾಗಿ, ಸಾಹಿತ್ಯದಲ್ಲಿ ಅಶಕ್ತಿವಹಿಸಿ. ಇತ್ತೀಚಿನ ದಿನಗಳಲ್ಲಿ ಭಾರತದ ನಿಜವಾದ ಇತಿಹಾಸ ಮಣ್ಣಿನ ಸೊಬಗನ್ನು ಸವಿಯುವ ಮೂಲಕ ಜಗತ್ತಿಗೆ ತಿಳಿಸುವರಾಗಿ ಎಂಬುದು ನನ್ನ ಆಶಯ. ಉತ್ಕೃಷ್ಟವಾದ ಸ್ವಾಭಿಮಾನದ ಬದುಕನ್ನು ಸಾಗಿಸಿ ಎಂಬುದೇ ಕನಸು ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರಸ್ತಾವಿಕವಾಗಿ ಮಾತನಾಡಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಅವರು ಸೋಲು ಸಾಲ, ಅವಮಾನ, ಅಪಮಾನದಿಂದ ಕಂಗೆಟ್ಟಿದ್ದ ಭಾರತಕ್ಕೆ ಉತ್ತಮ ನಾಯಕ ಸಿಕ್ಕಿರುವುದು ನಮ್ಮ ಭಾಗ್ಯ ಎಂದು ಹೇಳಿದರು.
ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ರಾಷ್ಟ್ರ ನಮ್ಮತನವನ್ನು ಕಳೆದುಕೊಂಡು ತಲೆ ತಗ್ಗಿಸುವರೆಗೆ ಮುಟ್ಟಿತು. ಮನೆ ಮನಗಳು ಒಡೆದುಹೋಗಿದೆ. ಕುಟುಂಬ ವ್ಯವಸ್ಥೆಗಳು ಮತ್ತೆ ಬೇಕು ಎಂಬ ಚಿಂತನೆ ಮೂಡತೊಡಗಿದೆ. ಜಗತ್ತಿಗೆ ಒಳಿತು ಉಂಟುಮಾಡುವ ದೇಶ ಭಾರತ. ಋಷಿ ಪರಂಪರೆಯಲ್ಲಿ ಭಾರತ ಬೆಳೆದು ನಿಂತಿದೆ. ಕೃಷಿ ಋಷಿ ಸಂಸ್ಕೃತಿಯೇ ಭಾರತದ ಅಂತಸತ್ವ, ಸ್ವಾಭಿಮಾನದ ಬದುಕಿಗೆ ಕಷ್ಟವಾಗುವ ಹಂತಕ್ಕೆ ತಲುಪಿತ್ತು ಅಂದರೆ ಬೇಸರದ ವಿಚಾರ.
ಸದೃಢ ಭಾರತದ ಹೆಜ್ಜೆಗಾಗಿ ರೀತಿ ನೀತಿಗಳು ಉತ್ತಮ ಸಮಾಜದ ನಿರ್ಮಾಣದ ಅಗತ್ಯವಿದೆ, ಅದಕ್ಕಾಗಿ ಉತ್ತಮ ವಿಚಾರಗಳ ಚರ್ಚೆ ಆಗಬೇಕಾಗಿದೆ, ಅದು ವಿದ್ಯಾರ್ಥಿಗಳ ಮೂಲಕ ಯಶಸ್ವಿಯಾಗಿ ನಡೆಯಬೇಕಾಗಿದೆ ಎಂದು ಹೇಳಿದರು.
ಜಗತ್ತಿನ ಅತ್ಯಂತ ಶ್ರೇಷ್ಠವಾದ, ಬಲಾಢ್ಯವಾದ ಶಕ್ತಿ ಇದ್ದರೆ ಅದು ಭಾರತದ ಸೈನಿಕರು ಎಂಬುದನ್ನು ನಾವು ಎದೆ ತಟ್ಟಿ ಹೇಳಬಹುದು, ಅದಕ್ಕೆ ಅನೇಕ ಉದಾಹರಣೆಗಳು ಇವೆ. ಪ್ರಸ್ತುತ ದೇಶದ ನಾಯಕತ್ವದಿಂದ ಬದಲಾವಣೆಯ ಪರ್ವಕಾಲ ಆರಂಭವಾಗಿದೆ, ದೇಶದ ಎಲ್ಲಾ ವ್ಯವಸ್ಥೆಗಳು ಬದಲಾವಣೆ ಅಗುತ್ತಿವೆ. ಸರ್ವರಿಗೂ ಸಮಾನವಾದ ಗೌರವ, ಅಧಿಕಾರ ಸಿಗುತ್ತಿದೆ. ಇಂತಹ ಕಾರ್ಯಕ್ರಮಗಳ ಮೂಲಕ ನಾನು ಏನು ಮಾಡಬೇಕು ಎಂಬ ಚಿಂತನೆಯ ಮೂಲಕ ರಚನಾತ್ಮಕ ವಾದ ರೀತಿಯಲ್ಲಿ ಕಾರ್ಯಕ್ರಮ ಮಾಡಲು ಸಾಧ್ಯ ವಾಗುತ್ತದೆ ಅ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪ್ರಶ್ನಿಸಿ ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ, ಚಿಂತಕ ಚೈತ್ರ, ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತ ಕುಮಾರ್, ನಾರಾಯಣ ಸೋಮಾಯಾಜಿ , ವಸಂತ ಮಾದವ ಮತ್ತಿತರರು ಉಪಸ್ಥಿತರಿದ್ದರು.
ಪ್ರಾಂಶುಪಾಲ ಕೃಷ್ಣ ಪ್ರಸಾದ್ ಸ್ವಾಗತಿಸಿ, ಶಿಕ್ಷಕ ಯತಿರಾಜ್ ಪೆರಾಜೆ ನಿರೂಪಿಸಿ, ವಂದಿಸಿದರು.
ಪ್ರಥಮ ವಿಚಾರಗೋಷ್ಟಿಯಲ್ಲಿ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತೆ, ನ್ಯಾಯವಾದಿ, ಕಲಾವಿದೆ ಮಾಳವಿಕ ಅವಿನಾಶ್ ಅವರ ಪೌರತ್ವ ತಿದ್ದುಪಡಿ ಕಾಯ್ದೆ: ಘಟನೆಗಳ ಸುತ್ತಮುತ್ತ ಎಂಬ ವಿಷಯಗಳ ಬಗ್ಗೆ ವಿಚಾರ ಸಂಕಿರಣ ನಡೆಸಲಿದ್ದಾರೆ.
ಎರಡನೇ ವಿಚಾರಗೋಷ್ಟಿಯಲ್ಲಿ ಬೆಂಗಳೂರಿನ ಬಿ.ಜೆ.ಪಿ. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಸಶಕ್ತ ಭಾರತ: ಆರ್ಥಿಕತೆ ಮತ್ತು ರಕ್ಷಣೆಯ ಪಾತ್ರ ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣ ನಡೆಸಲಿದ್ದಾರೆ.
ಮೂರನೇ ವಿಚಾರಗೋಷ್ಟಿಯಲ್ಲಿ ಬೆಂಗಳೂರಿನ ಆರೋಹಿ ರಿಸರ್ಚ್ ಫೌಂಡೇಶನ್ ನ ನಿರ್ದೇಶಕ, ವಿಮರ್ಶಕ, ಚಿಂತಕ ಮತಿಘಟ್ಟ ಚೈತ್ರ ಅವರ ಜನಸಂಖ್ಯೆ: ಲಾಭವೇ- ಅಪಾಯವೇ ನಡೆಸಲಿದ್ದಾರೆ.
ನಾಲ್ಕನೇ ವಿಚಾರಗೋಷ್ಟಿಯಲ್ಲಿ ಮೈಸೂರಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ಪ್ರಾಧ್ಯಾಪಕ ಬಿ.ವಿ.ವಸಂತ್ ಕುಮಾರ್ ಅವರ ಬೌದ್ಧಿಕ ದಾಸ್ಯ: ಮೇಲೇಳುತ್ತಿದೆಯೇ ಭಾರತ ಎಂಬ ವಿಷಯಗಳ ಕುರಿತು ವಿಚಾರ ಸಂಕಿರಣ ನಡೆಯಲಿದೆ.