


ಬಂಟ್ವಾಳ: ಶ್ರೀ ಕ್ಷೇತ್ರದಲ್ಲಿ ಫೆ. ೯ರಂದು ಪುನರ್ ಪ್ರತಿಷ್ಠಾ ದಿನದ ಅಂಗವಾಗಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಶತರುದ್ರಾಭಿಷೇಕ, ಸಾಮೂಹಿಕ ಆಶ್ಲೇಷ ಬಲಿಪೂಜೆ ಹಾಗೂ ಶಿವ ಪಂಚಾಕ್ಷರಿ ಜಪದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಅತೀ ಪುರಾತನವು ಪ್ರಸಿದ್ಧವು ಆಕರ್ಷಣೀಯಾದ ನರಹರಿ ಪರ್ವತದ ಶಿವಕ್ಷೇತ್ರ ಸಾಕ್ಷಾತ್ ಭೂಲೋಕದ ಕೈಲಾಸವೆಂದರು ಇಲ್ಲಿ ಶಿವನ ಸಾನಿಧ್ಯ ನೂರಕ್ಕು ನೂರು ಇದ್ದು ಭಗವಂತನನ್ನು ಆರಾಧಿಸುವಾಗ ಶಾಶ್ವತ ಸಂತೋಷ ಪ್ರಾಪ್ತಿಯಾಗುತ್ತದೆ. ನಾನು ಈ ಹಿಂದೆ ಅಂದರೆ ಮೂರು ದಶಕಗಳ ಹಿಂದೆ ಬರುವಾಗ ಇರುವ ಪರ್ವತದ ಚಿತ್ರಣ ಈಗ ಸಂಪೂರ್ಣ ಬದಲಾಗಿದ್ದು ತುತ್ತ ತುದಿಯವರೆಗೆ ಮಾರ್ಗದ ರಚನೆಯಾಗಿದ್ದು ಹೆಚ್ಚೆಚ್ಚು ಭಕ್ತರನ್ನು ಕೈ ಬೀಸಿ ಕರೆಯುವಂತೆ ಮಾಡಿದ ಕಾರ್ಯ ಶ್ಲಾಘನೀಯ. ಅದಕ್ಕೆ ಡಾ. ಪ್ರಶಾಂತ್ ಮಾರ್ಲ ಸಹಿತ ಎಲ್ಲಾ ಆಡಳಿತ ಮಂಡಳಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಎಡನೀರು ಮಠಾದೀಶರಾದ ಶ್ರೀ ಕೇಶವಾನಂದ ಭಾರತಿ ಮಹಾ ಸ್ವಾಮಿಗಳು ಹೇಳಿದರು.
ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಆಶೀರ್ವಾಚನ ನೀಡುತ್ತಾ, ನಿತ್ಯ ಹರಿಧ್ವರ್ಣದ ಸಸ್ಯ ಶ್ಯಾಮಾಲೆಯ ಸೆರಗಿನಲ್ಲಿರುವ ನರಹರಿ ಪರ್ವತದ ೬.ಕೋಟಿ ರೂ. ವೆಚ್ಚದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶದ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿ, ಈಗಾಗಲೇ ಜೀರ್ಣೋದ್ಧಾರ ಕಾರ್ಯ ಯಶ್ವಸಿಯಾಗಲು ಸಾಮೂಹಿಕ ಆಶ್ಲೇಷ ಬಲಿ ಪೂಜೆ ನಡೆಯುತ್ತಿದ್ದು ಇನ್ನೂ ಮುಂದೆ ಭಜನ ಸತ್ಸಂಗ, ಶಿವ ಪಂಚಾಕ್ಷರಿ ಜಪ ಮುಂತಾದ ದೇವರ ಸ್ಮರಣೆ ಕಾರ್ಯಕ್ರಮವು ಕ್ಷೇತ್ರದಲ್ಲಿ ಆಗಾಗ ಜರಗಬೇಕೆಂದರು ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶಕ್ಕೆ ಸಂಪೂರ್ಣ ಸಹಕಾರ ನೀಡಿವುದಾಗಿ ತಿಳಿಸಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿಯವರು ಆಗಮಿಸಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಆಡಳಿತ ಮೋಕ್ತೆಸರ ಡಾ.ಪ್ರಶಾಂತ್ ಮಾರ್ಲ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮೋಕ್ತೆಸರುಗಳಾದ ಕೃಷ್ಣ ನಾಕ್, ಸುಂದರ ಬಂಗೇರ, ಬಾಲಕೃಷ್ಣ ಪೂಜಾರಿ,ಮಾಧವ ಶೆಣೈ, ಮೃಣಾಲಿನಿ.ಸಿ. ನಾಯ್ಕ್, ಪ್ರತಿಭಾ ಎ. ರೈ, ಎಂ.ಎನ್. ಕುಮಾರ್, ಹಾಗೂ ಮ್ಯಾನೇಜರ್ ಆನಂದ್ ಮತ್ತು ಜೀರ್ಣೋದ್ಧಾರ ಸಂಘಟನಾ ಕಾರ್ಯದರ್ಶಿಗಳಾದ ಕಾಂತಾಡಿಗುತ್ತು ಸೀತಾರಾಮ ಶೆಟ್ಟಿ, ಶಂಕರ ಆಚಾರ್ಯ, ಕಿಶೋರ್.ಕೆ. ಕುದ್ಮಲ್ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ. ಆತ್ಮರಂಜನ್ ರೈ ಅವರು ಸ್ವಾಗತಿಸಿ, ಗೌರವಿಸಿದರು. ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಅವರು ಕ್ಷೇತ್ರದ ಬಗ್ಗೆ ಪ್ರಸ್ತಾವನೆಗೈದರು. ಪ್ರಧಾನ ಅರ್ಚಕ ಪರಮೇಶ್ವರ ಮಯ್ಯ ಅವರು ಶಿವ ದೇವರಿಗೆ ವಿಶೇಷ ಪೂಜೆ ಮಾಡಿ ಪ್ರಸಾದ ನೀಡಿದರು. ಶಂಕರ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


