ಬಂಟ್ವಾಳ: ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ದೇವಸ್ಥಾನಕ್ಕೆ ದ.ಕ.ಜಿಲ್ಲಾ ಉಸ್ತುವಾರಿ, ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಭೇಟಿ ನೀಡಿ ಮುಜರಾಯಿ ಇಲಾಖೆಯ ವತಿಯಿಂದ ಮೇ 24ರಂದು ನಂದಾವರ ಕ್ಷೇತ್ರದಲ್ಲಿ ನಡೆಯಲಿರುವ ಸಾಮೂಹಿಕ ವಿವಾಹದ ಕುರಿತು ಮಾಹಿತಿ ನೀಡಿದರು.
ಬಳಿಕ ಮಾತನಾಡಿದ ಅವರು, ರಾಜ್ಯ ಮುಜರಾಯಿ ಇಲಾಖೆ ವ್ಯಾಪ್ತಿಯ ಆಯ್ದ 100 ದೇವಸ್ಥಾನಗಳಲ್ಲಿ ಸಪ್ತಪದಿ ಸಾಮೂಹಿಕ ವಿವಾಹ ಆಯೋಜಿಸಲು ಸಿದ್ಧತೆ ನಡೆಸಲಾಗಿದ್ದು, ಎಲ್ಲಡೆಯಿಂದ ವ್ಯಾಪಕ ಬೆಂಬಲ ಲಭಿಸಿದೆ. ಈ ವರ್ಷ ವಧು-ವರರ ಸಂಖ್ಯೆ ಕಡಿಮೆಯಿದ್ದರೂ ಭವಿಷ್ಯದಲ್ಲಿ ಇದೊಂದು ಉತ್ತಮ ಯೋಜನೆಯಾಗಿ ಹೊರಹೊಮ್ಮಲಿದೆ.

ಸರಳವಾಗಿ ವಿವಾಹವಾಗಲು ಬಯಸುವ ಎಲ್ಲರಿಗೂ ಇಲ್ಲಿ ಅವಕಾಶವಿದ್ದು, ಎ. 26 ಮತ್ತು ಮೇ. 24 ರಂದು ಈ ವಿವಾಹನಗಳು ನಡೆಯಲಿದೆ. ಈ ವಿವಾಹ ಸಮಾರಂಭದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈಗಾಗಲೇ ಸಪ್ತಪದಿ ರಥವನ್ನೂ ಬಿಡುಗಡೆ ಮಾಡಲಾಗಿದೆ. ವಧು-ವರರಿಗೆ ನೋಂದಣಿಗೆ ಮಾ.27 ಕೊನೆಯ ದಿನಾಂಕವಾಗಿದ್ದು, ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ಒಂದು ಕ್ಷೇತ್ರಕ್ಕೆ ಬಂದು ವಧು-ವರರನ್ನು ಆಶೀರ್ವಾದ ಮಾಡಲು ಒಪ್ಪಿಕೊಂಡಿದ್ದಾರೆ ಎಂದರು.
ಮುಜರಾಯಿ ದೇವಸ್ಥಾನಗಳಲ್ಲಿ ಯಾವುದೇ ಅಭಿವೃದ್ಧಿಯ ಅನುಮೋದನೆಗೆ ಅಲೆದಾಡಬೇಕಾದ ಸ್ಥಿತಿ ಇದ್ದು, ಅಭಿವೃದ್ಧಿ ಕಾರ್ಯಕ್ಕೆ ವೇಗ ನೀಡಲು ಇ-ಆಡಳಿತ ಜಾರಿಗೆ ತರಲು ಯೋಚಿಸಲಾಗಿದೆ. ಜತೆಗೆ ದೇವಸ್ಥಾನಗಳ ಮೂಲಕ ಮಹಿಳೆಯರು, ದುರ್ಬಲರ ಶ್ರೇಯಸ್ಸಿಗೆ ಯಾವುದಾದರೂ ಕಾರ್ಯಕ್ರಮ ನಡೆಸುವ ಚಿಂತನೆ ಇದೆ ಎಂದರು.

ಭಕ್ತರ ಅನುಕೂಲದ ದೃಷ್ಟಿಯಿಂದ ನಂದಾವರ ಕ್ಷೇತ್ರಕ್ಕೆ ಪಾಣೆಮಂಗಳೂರಿನಿಂದ ನೇರ ಸಂಪರ್ಕಕ್ಕೆ ರಸ್ತೆಯ ಪ್ರಸ್ತಾಪವೊಂದಿದೆ. ಈ ಹಿಂದೆ ಬಂಟ್ವಾಳ ಶಾಸಕರಾಗಿದ್ದ ಬಿ.ರಮಾನಾಥ ರೈ ಅವರು ಸುಮಾರು 6.40 ಕೋ.ರೂ.ಗಳ ಪ್ರಸ್ತಾಪವನ್ನು ಲೋಕೋಪಯೋಗಿ ಇಲಾಖೆಯಿಂದ ಪ್ರವಾಸೋದ್ಯಮ ಇಲಾಖೆಗೆ ಕಳುಹಿಸಿಕೊಟ್ಟಿದ್ದರು. ಈಗಿನ ಶಾಸಕ ರಾಜೇಶ್ ನಾಯ್ಕ್ ಅವರು 7 ಕೋ.ರೂ.ಗಳ ಪ್ರಸ್ತಾವನೆಯನ್ನು ನೀಡಿದ್ದಾರೆ. ಇದರ ಕುರಿತು ಗಮನ ಹರಿಸಲು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಮನವಿ ಮಾಡಿದರು.
ಕ್ಷೇತ್ರದ ಮುಖ್ಯಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ, ರಾಜ್ಯ ಬಾಲಭವನ ಸೊಸೈಟಿಯ ಮಾಜಿ ಅಧ್ಯಕ್ಷೆ ಸುಲೋಚನ ಜಿ.ಕೆ.ಭಟ್, ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಸದಸ್ಯರು, ವಿವಿಧ ಧಾರ್ಮಿಕ ಕ್ಷೇತ್ರಗಳ ಪ್ರಮುಖರು ಭಾಗವಹಿಸಿದ್ದರು.
ಕ್ಷೇತ್ರಕ್ಕೆ ಸೋಲಾರ್ ವ್ಯವಸ್ಥೆ ನೀಡುವ ಕುರಿತ ಮನವಿಯನ್ನು ವ್ಯವಸ್ಥಾಪನಾ ಸಮಿತಿಯ ಸದಸ್ಯೆ ರಮಾ ಎಸ್.ಭಂಡಾರಿ ಅವರು ವಾಚಿಸಿದರು. ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎ.ಸಿ.ಭಂಡಾರಿ ಸ್ವಾಗತಿಸಿದರು. ಸದಸ್ಯ ಡಾ| ಎಸ್.ಎಂ.ಗೋಪಾಲಕೃಷ್ಣ ಆಚಾರ್ಯ ವಂದಿಸಿದರು. ಎಸ್.ಗಂಗಾಧರ ಭಟ್ ಕೊಳಕೆ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here