


ಇಷ್ಟರವರೆಗೆ ಮಾಡಿದ ಯುದ್ಧದಲ್ಲಿ
ಸೋತಿತ್ತು ಪ್ರಕೃತಿ.
ಇದು ಕೊನೆಯ ಯುದ್ಧ..!
ಭೂಕಂಪ,ಸುನಾಮಿ,
ಬಿರುಗಾಳಿ,ಬರಗಾಲ,ಪ್ರವಾಹ
ಯಾವುದಕ್ಕೂ ಮಾನವ
ಶರಣಾಗಲಿಲ್ಲ..
ಪ್ರಕೃತಿಯ ಮೇಲೆ ತನ್ನ
ಬುದ್ಧಿವಂತಿಕೆ ತೋರಿಸುತ್ತಲೇ ಇದ್ದ.
ಗೆಲುವ ನಗೆ ಬೀರುತ್ತಲೇ ಇದ್ದ
ಅದಕ್ಕೆಂದೇ ಕೊನೆಯ ಅಸ್ತ್ರ
ಪ್ರಯೋಗ ಮಾಡಿಯೇ ಬಿಟ್ಟಿತು..!?
ನಿಧಾನವಾಗಿ ಬೆಳೆಯುತ್ತಿದ್ದ
ಮರಗಳೆಲ್ಲ ಏಕಾಏಕಿ
ಒಮ್ಮೆಲೆ ಬೆಳೆಯಲು ಪ್ರಾರಂಭಿಸಿದವು..
ಮಾನವನ ಸೈನ್ಸ್ ಪ್ರಕಾರ
ಮರಗಳ ಬೇರು
ಗಂಟೆಗೆ ಒಂದು ಕಿಲೋಮೀಟರ್ ನಷ್ಟು
ಬೇರು ಬೆಳೆದರೆ
ಮರ ಗಂಟೆಗೆ ಹತ್ತು ಕಿಲೋಮೀಟರ್
ಬೆಳೆಯುತ್ತಿತ್ತು..!
ಈಗ ಗಿಡವು ಮರ..
ಮರ ಹೆಮ್ಮರ..
ಹೆಮ್ಮರ ಆಕಾಶವನ್ನೇ ಮುಟ್ಟುವ ಮರ..!
ಎಲ್ಲೆಂದರಲ್ಲಿ ಬೇರು..
ರಸ್ತೆ, ನಿಲ್ದಾಣ
ಮನೆಯೊಳಗೆ..,
ಮನೆ ಮೇಲೆ,
ಕಟ್ಟಡ ಸುತ್ತಿ ಗೋಡೆಗಳು
ಬಿರುಕು ಬಿಡುತ್ತಿದ್ದವು..
ಕೆಲವು ಕುಸಿಯುತ್ತಿದ್ದವು.
ಬೇರು ತುಂಡರಿಸ ಬೇಕೆನ್ನುವ
ಹೊತ್ತಿಗೆ
ಇನ್ನೊಂದು ಬೇರು ಬೆಳೆಯುತ್ತಿತ್ತು..
ಬುದ್ಧಿವಂತಿಕೆ ಉಪಯೋಗಿಸಿ
ಮರಕ್ಕೆ ಸುತ್ತುವರಿದು,
ಒಮ್ಮೆಲೆ ಸುತ್ತಲಿನ ಬೇರ ತುಂಡರಿಸುವ ಹೊತ್ತಿಗೆ
ಮರ ಹೆಮ್ಮರವಾಗಿರುತ್ತಿತ್ತು
ಬಿದ್ದರೆ ಅದರಡಿಗೆ ಸಿಕ್ಕಿ
ಸಾವು ಗ್ಯಾರಂಟಿ…
ಮನೆ ಕಳೆದುಕೊಂಡ
ಆಸ್ತಿ ಪಾಸ್ತಿ ಏನು ಉಳಿದಿಲ್ಲ..
ಎಲ್ಲೆಂದರಲ್ಲಿ ಬೃಹತ್ ಮರಗಳು
ರಸ್ತೆ ಗಳಿಲ್ಲ,ಗಾಡಿ ಓಡಾಡಲಾಗುವುದಿಲ್ಲ.
ವಿಮಾನ ಹಾರಾಟ ಸಾಧ್ಯವೇ ಇಲ್ಲ.
ಯಾವರೀತಿಯ ಸಂಪರ್ಕವೂ ಉಳಿದಿಲ್ಲ
ನನ್ನದು ಎನ್ನುವುದು ಏನಿಲ್ಲ,
ದೇಹವೊಂದನ್ನು ಬಿಟ್ಟು..!
ಆದರೂ ಆಹಾರಕ್ಕೆ ಕೊರತೆ ಇಲ್ಲ
ಗಿಡ ಮರವಾಗಿದೆ.
ಮರ ಹೆಮ್ಮರವಾಗಿದೆ.
ಹಣ್ಣು ಹಂಪಲು ಬೇಕಾದಷ್ಟಿತ್ತು..
ಈಗ ಮರದ ಪೊಟರೆಯೇ ಮನೆ.
ಅಂದಿನ ಕಾಡು ಜನರಂತೆ..
ಮಾನವ ಕುಲ ನಾಶ ಹೇಗೂ ಆಗಬಹುದು..
ಉಳಿಯಬೇಕಾದರೆ
ಪ್ರಕೃತಿ ಉಳಿಯಬೇಕು..!
✍ಯತೀಶ್ ಕಾಮಾಜೆ


