ಸಮರ್ಪಣಾ ಭಾವದಿಂದ ನಮ್ಮ ಕರ್ತವ್ಯ ಮಾಡಿದಾಗ ಜೀವನದಲ್ಲಿ ಯಶಸ್ಸನ್ನು ಪಡೆಯಬಹುದು. ನಮ್ಮ ಏಳಿಗೆಗೆ ಸಹಕರಿಸಿದವರನ್ನು ಸ್ಮರಿಸುವ ವಿಶಾಲ ಮನಸ್ಸು ನಮ್ಮದಾಗಬೇಕು. ತಾಯಿಯಂದಿರನ್ನು ಗೌರವಿಸುವ ಸಂಸ್ಕೃತಿ ನಮ್ಮದಾಗಬೇಕೆಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ನುಡಿದರು.
ಅವರು ಬುಧವಾರ ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ನಡೆದ ಪ್ರತಿಷ್ಠಾ ವರ್ಧಂತ್ಯುತ್ಸವದ ಅಂಗವಾಗಿ ನಡೆದ ಧರ್ಮ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಯಾವುದನ್ನೂ ಅಪೇಕ್ಷೆ ಪಡುವ ಮನಸ್ಸು ಸಾಧಕರಿಗೆ ಇರಬಾರದು. ಹಿರಿಯರಿಂದ ಕಲಿತ ವಿದ್ಯೆ ಬದುಕಿಗೆ ದಾರಿದೀಪವಾಗುವುದು. ತನ್ಮಯತೆಯಿಂದ ಮಕ್ಕಳ ಜ್ಞಾನ ವೃದ್ಧಿ ಸಾಧ್ಯ ಎಂದರು.
ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ಕಮಲಾದೇವಿಪ್ರಸಾದ ಅಸ್ರಣ್ಣರವರು ಆಶೀರ್ವಚನ ನೀಡಿ ತಾವು ತಮ್ಮವರೆಂಬ ಭಾವದಿಂದ ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಮಾಣಿಲಶ್ರೀಗಳಿಗಿದೆ. ದೇಶ ಕಟ್ಟುವ ಕಾರ್ಯ ಧಾರ್ಮಿಕ ಕೇಂದ್ರಗಳಿಂದ ಸಾಧ್ಯ. ಸನ್ನಿಧಾನ ಬೆಳೆದರೆ ಏನನ್ನು ಲೋಕದಲ್ಲಿ ಸಾಧಿಸಲು ಸಾಧ್ಯ. ಸ್ವಾಮೀಜಿ ಹಾಗೂ ಧಾರ್ಮಿಕ ಕೇಂದ್ರಗಳಿಂದ ಸಮಾಜ ಕಟ್ಟುವ ಕಾರ್ಯವಾಗಬೇಕು ಎಂದರು.
ಆಸರೆ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷೆ ಡಾ ಆಶಾ ಜ್ಯೋತಿ ರೈ ಮಾಲಾಡಿ, ಧಾರ್ಮಿಕ ನೇತಾರ ವಿಜಯಾನಂದ ಜೋಗಿ, ಬೆಂಗಳೂರಿನ ಮಂಜುನಾಥ ಸ್ವೀಟ್ಸ್ ನ ಮಾಲಕರಾದ ಲೊಕೇಶ್, ಧಾರ್ಮಿಕ ಮುಂದಾಳು ಕೈಯೂರು ನಾರಾಯಣ ಭಟ್, ಮಂಗಳೂರಿನ ಉದ್ಯಮಿ ಶ್ರೀನಿವಾಸ್ ಶೇಟ್, ಮಹಿಳಾ ಸಮಿತಿ ಅಧ್ಯಕ್ಷೆ ವನಿತಾ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲಕುಮಿ ತಂಡದ ಕಲಾವಿದ ಹೆಚ್ಕೆ ನಯನಾಡುರವರನ್ನು ಸನ್ಮಾನಿಸಲಾಯಿತು.
ಟ್ರಸ್ಟಿ ತಾರಾನಾಥ ಕೊಟ್ಟಾರಿ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಗೀತಾ ಪುರುಷೋತ್ತಮ್ ಬಳಗದವರು ಪ್ರಾರ್ಥಿಸಿದರು. ಟ್ರಸ್ಟಿ ಪುರುಷೋತ್ತಮ ಚೇಂಡ್ಲ ಬೆಂಗಳೂರು ಸ್ವಾಗತಿಸಿದರು. ಟ್ರಸ್ಟಿ ಮಂಜು ವಿಟ್ಲ ಸನ್ಮಾನ ಪತ್ರ ವಾಚಿಸಿದರು. ಟ್ರಸ್ಟಿ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ವಂದಿಸಿದರು.
ಬೆಳಗ್ಗೆ ಪುಣ್ಯಾಹ ವಾಚನ, ಶ್ರೀ ಚಂಡಿಕಾಯಾಗ, ವಿಠಲಯಾಗ, ಮಧ್ಯಾಹ್ನ ಪೂರ್ಣಾಹುತಿ, ಪ್ರತಿಷ್ಠಾವರ್ಧಂತ್ಯುತ್ಸವ, ಪ್ರಸನ್ನ ಮಹಾಪೂಜೆ, ಮಂತ್ರಾಕ್ಷತೆ, ಅನ್ನಸಂತರ್ಪಣೆ ನಡೆಯಿತು.
ರಾತ್ರಿ ದುರ್ಗಾನಮಸ್ಕಾರ ಪೂಜೆ, ಮಹಾಪೂಜೆ ನಡೆಯಿತು. ಬಳಿಕ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ’ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ನಡೆಯಿತು.