


ಬಂಟ್ವಾಳ: ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ಭಾಷೆಯನ್ನು ಅಧಿಕೃತ ಭಾಷೆಯಾಗಿ ಘೋಷಿಸುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ ರವಿ ಅವರಿಗೆ ಮನವಿ ಸಲ್ಲಿಸಲಾಯಿತು.
ತುಳುಲಿಪಿಯಲ್ಲಿ ಸಾಹಿತ್ಯಿಕ ಪ್ರಕಾರಗಳು ರಾಮಾಯಣ, ಮಹಾಭಾರತದಂತಹ ಉದ್ಗ್ರಂಥಗಳು ಪ್ರಾಪ್ತಿಯಾಗಿದೆ. ತುಳು ಲಿಪಿಯ ಸಹಸ್ರಾರು ಶಿಲಾಶಾಸನಗಳು, ತಾಮ್ರ ಪತ್ರಗಳು, ತಾಡೆಯೋಲೆಗಳ ದಾಖಲೆಗಳು ಕರಾವಳಿ ಪ್ರದೇಶದಲ್ಲಿ ಲಭ್ಯವಿದೆ. ನೀಲೇಶ್ವರದಿಂದ ಅಂಕೋಲ, ಮೂಡಣ ಘಟ್ಟ, ಪಡುವಣ ಕಡಲು, ಮೃದು ಮಣ್ಣಿನ ಈ ನೆಲವನ್ನು ತುಳುರಾಜ್ಯ ಎಂದೇ ಶಾಸನಗಳು ನಮಗೆ ಲಭ್ಯವಾಗಿರುವುದು. ಹಾಗಾಗಿ ರಾಜ್ಯದ ಅಧಿಕೃತ ಭಾಷೆಯಾಗಿ ಹಾಗೂ ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ಸಕಾಲವಾಗಿದೆ ಎಂದು ಮುಖ್ಯಮಂತ್ರಿ ಹಾಗೂ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
ಈ ಸಂಧರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಉತ್ತರ ಶಾಸಕ ಡಾ.ವೈ. ಭರತ್ ಶೆಟ್ಟಿ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಪಸ್ಥಿತರಿದ್ದರು.


