ಬಂಟ್ವಾಳ: ಪಾಕಿಸ್ತಾನ ಮತ್ತು ಮುಸ್ಲಿಮರನ್ನು ದ್ವೇಷಿಸುವುದೇ ದೇಶಭಕ್ತಿ ಎಂದು ಆರೆಸ್ಸೆಸ್ ಮತ್ತು ಬಿಜೆಪಿ ಅವರು ನಂಬಿದ್ದಾರೆ. ಅದೇ ರೀತಿ ಆರೆಸ್ಸೆಸ್ ಮತ್ತು ಬಿಜೆಪಿಯನ್ನು ಟೀಕೆ ಮಾಡುವುದೇ ನಮ್ಮ ದೇಶ ಭಕ್ತಿ ಎಂಬ ತಪ್ಪುಕಲ್ಪನೆ ಕೆಲವರಲ್ಲಿ ಬೆಳೆಯುತ್ತಿದೆ. ಇದು ಸರಿಯಾದ ಕಲ್ಪನೆ ಅಲ್ಲ. ಆರೆಸ್ಸೆಸ್ ಮತ್ತು ಬಿಜೆಪಿ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಿ ಸಾಮರಸ್ಯ ಭಾವೈಕ್ಯತೆಯ ಬಲಿಷ್ಠ ಭಾರತವನ್ನು ಕಟ್ಟುವ ನಿಜವಾದ ದೇಶಭಕ್ತಿ ಯಾಗಿದೆ ಎಂದು ಚಿಂತಕ ಮಹೇಂದ್ರಕುಮಾರ್ ಅಭಿಪ್ರಾಯಪಟ್ಟರು.

 

ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್.ಆರ್.ಸಿ), ರಾಷ್ಟ್ರೀಯ ಜನಸಂಖ್ಯಾ ನೊಂದಣಿ(ಎನ್.ಪಿ.ಆರ್) ಯನ್ನು ವಿರೋಧಿಸಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ‌ ಸಮಿತಿ ಫರಂಗಿಪೇಟೆಯ‌ ವತಿಯಿಂದ ಶುಕ್ರವಾರ ಫರಂಗಿಪೇಟೆಯ ಸುಲ್ತಾನ್ ಮೈದಾನದಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ನಮ್ಮ ಹೋರಾಟ, ಚಳವಳಿ ಕೇವಲ ಸಿಎಎ, ಎನ್.ಆರ್.ಸಿ., ಎನ್.ಪಿ.ಆರ್.ಗೆ ಮಾತ್ರ ಸೀಮಿತವಾಗಬಾರದು. ಯಾರೋ ಒಂದಿಬ್ಬರು ರಚಿಸಿರುವ ಈ ಕಾಯ್ದೆಗಳು ಜಾರಿಯಾಗಲ್ಲ. ಕಾಯ್ದೆ ಜಾರಿ ಮಾಡಲು ಈ ದೇಶದ ಜನರು ಬಿಡುವುದೂ ಇಲ್ಲ. ಇಂದು ಈ ದೇಶದ ಆಡಳಿತ ದೇಶವನ್ನು ಪ್ರೀತಿ ಮಾಡದ, ದೇಶದ ಆಸ್ತಿಯನ್ನು ಕಿತ್ತು ಖಾಸಗಿಯವರಿಗೆ ಹಂಚುತ್ತಿರುವ, ದೇಶವನ್ನು ಧರ್ಮದ ಆಧಾರದಲ್ಲಿ ಛಿದ್ರ ಮಾಡುವ ಮನಸ್ಥಿತಿಯ ದುಷ್ಟ ಶಕ್ತಿಗಳ ಕೈಗೆ ಹೋಗಿದೆ. ಇದಕ್ಕೆ ಯಾರು ಕಾರಣ ಎಂಬುದನ್ನು ನಾವೆಲ್ಲರೂ ಅವಲೋಕನ ಮಾಡಬೇಕಾಗಿದೆ. ಹಾಗಾಗಿ ಆವೇಶಭರಿತ ಭಾಷಣಗಳ ಮೂಲಕ ಜನರ ಭಾವನೆಗಳನ್ನು ಕದಡುವ ಕೆಲಸ ಮಾಡದೆ ಆರೆಸ್ಸೆಸ್ ಮತ್ತು ಬಿಜೆಪಿಯ ಷಡ್ಯಂತ್ರಗಳನ್ನು ಜನರಿಗೆ ತಿಳಿಸುವ ಕೆಲಸ ನಮ್ಮದಾಗಬೇಕು. ಅದಕ್ಕಾಗಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಹೆಚ್ಚು ನಡೆಯಬೇಕು ಎಂದು ಅವರು ಹೇಳಿದರು.

ದೇಶದ ಆಡಳಿತವನ್ನು ತನ್ನಲ್ಲಿ ಶಾಶ್ವತವಾಗಿ ಉಳಿಸಿಕೊಳ್ಳುಲು ಬಿಜೆಪಿ ಮತ್ತು ಆರೆಸ್ಸೆಸ್ ಹಿಂದು ಮುಸ್ಲಿಮರ ಮಧ್ಯೆ ಕಂದಕವನ್ನು ನಿರ್ಮಾಣ ಮಾಡುತ್ತಿವೆ. ಈ ಕೆಲಸಕ್ಕಾಗಿ ಹಿಂದುಳಿದ ಜಾತಿಗಳ ಅಮಾಯಕ ಯುವಕರನ್ನು ಬಳಸಿಕೊಳ್ಳಲಾಗುತ್ತಿದೆ. ಇದರ ವಿರುದ್ಧ ನಾವು ವೇದಿಕೆಯಲ್ಲಿ ನಿಂತು ಆರೆಸ್ಸೆಸ್ ಮತ್ತು ಬಿಜೆಪಿ ವಿರುದ್ಧ ಆವೇಶಭರಿತ ಭಾಷಣ ಮಾಡಿದಾಗ ಅದನ್ನು ಹಿಂದೂ ಧರ್ಮ ಮತ್ತು ದೇಶದ ವಿರುದ್ಧ ಟೀಕೆ ಮಾಡಲಾಗುತ್ತಿದೆ ಎಂದು ಬಿಂಬಿಸಿ ಇನ್ನಷ್ಟು ಯುವಕರನ್ನು ತಮ್ಮ ಪರ ಕಟ್ಟಿಕೊಳ್ಳಲು ಬಿಜೆಪಿ ಮತ್ತು ಆರೆಸ್ಸೆಸ್ ಗೆ ಸಹಕಾರಿಯಾಗುತ್ತಿದೆ. ಹಾಗಾಗಿ ಬಿಜೆಪಿ, ಆರೆಸ್ಸೆಸ್ ಷಡ್ಯಂತರಗಳಿಗೆ ಬಲಿಯಾಗುತ್ತಿರುವ ಅಮಾಯಕ ಯುವಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ನಾವು ಮಾಡಬೇಕಾಗಿದೆ ಎಂದು ಅವರು ಹೇಳಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಶಾಸಕ ಯು.ಟಿ.ಖಾದರ್, ಚಿಂತಕಿ ಭವ್ಯ ನರಸಿಂಹಮೂರ್ತಿ, ವಿದ್ಯಾರ್ಥಿ ನಾಯಕಿ ಅಮೂಲ್ಯ, ಮಂಗಳೂರು ದಾವ ಸೆಂಟರ್ ಕಾರ್ಯದರ್ಶಿ ಎಂ.ಜಿ.ಮುಹಮ್ಮದ್, ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಯಾಕೂಬ್ ಸ ಅದಿ, ಎಸ್.ಡಿ.ಪಿ.ಐ. ರಾಜ್ಯ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ, ಎಸ್ಕೆಎಸ್ಸೆಸ್ಸೆಫ್ ಕ್ಯಾಂಪಸ್ ವಿಂಗ್ ರಾಜ್ಯಾಧ್ಯಕ್ಷ ಇಬ್ರಾಹಿಂ ಬಾತಿಷ್ ಮಾತನಾಡಿದರು ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿ ಸಮಿತಿಯ ಅಧ್ಯಕ್ಷ ಮುಹಮ್ಮದ್ ಬಾವ ಅಧ್ಯಕ್ಷತೆ ವಹಿಸಿದ್ದರು ಇರ್ಷಾದ್ ದಾರಿಮಿ ಮಿತ್ತಬೈಲ್ ಉಪಸ್ಥಿತರಿದ್ದರು.

ಫರಂಗಿಪೇಟೆ ಜುಮಾ ಮಸೀದಿಯ ಖತೀಬ್ ಅಬ್ಬಾಸ್ ದಾರಿಮಿ ದುಅ ಮೂಲಕ ಪ್ರತಿಭಟನೆಯನ್ನು ಉದ್ಘಾಟಿಸಿದರು. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟ ಸಮಿತಿಯ ಉಪಾಧ್ಯಕ್ಷ ಉಮರ್ ಫಾರೂಕ್ ಸ್ವಾಗತಿಸಿದರು. ಪಿ.ಎಂ.ಮುಹಮ್ಮದ್ ವಂದಿಸಿದರು. ನ್ಯಾಯವಾದಿ ಮುಹಮ್ಮದ್ ಗಝಾಲಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here