ಬಂಟ್ವಾಳ: ಯುವ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಿಕೊಳ್ಳಲು ಮಾಹಿತಿ ತಂತ್ರಜ್ಞಾನದ ಬಳಕೆ ಅತ್ಯಗತ್ಯವಾಗಿದ್ದು, ಕೌಶಲ್ಯ ಹೊಂದಿದ ಮಾನವ ಸಂಪನ್ಮೂಲ ಇಂದಿನ ಅಗತ್ಯವಾಗಿದೆ. ಕರ್ನಾಟಕ ಸರ್ಕಾರ ’ಜ್ಞಾನ ದೀಪ್ತಿ’ ಯೋಜನೆಯಡಿಯಲ್ಲಿ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣೆಯನ್ನು ಮಾಡಿತ್ತಿದ್ದು, ಇದರಿಂದ ಶೈಕ್ಷಣಿಕ ಸಬಲೀಕರಣ ಸಾಧ್ಯ. ವಿದ್ಯಾರ್ಥಿಗಳು ಈ ಲ್ಯಾಪ್‌ಟಾಪ್ ಗಳನ್ನು ಸದುಪಯೋಗಪಡಿಸಿಕೊಂಡು ಶೈಕ್ಷಣಿಕ ಉತ್ತುಂಗಕ್ಕೇರಬೇಕು ಎಂದು ಲ್ಯಾಪ್‌ಟಾಪ್ ವಿತರಿಸಿ ಮಾತನಾಡಿದ ಸಂಗಬೆಟ್ಟು ಕ್ಷೇತ್ರದ ಜಿ. ಪಂ. ಸದಸ್ಯ ತುಂಗಪ್ಪ ಬಂಗೇರ ಅಭಿಪ್ರಾಯಪಟ್ಟರು.
ಬೆಂಗಳೂರು ಬಾಲಭವನದ ಮಾಜಿ ಅಧ್ಯಕ್ಷೆ ಸುಲೋಚನ ಭಟ್ ಮಾತನಾಡಿ, ಸಂಸ್ಥೆಯಲ್ಲಿ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣ ಪಡೆಯುತ್ತಿರುವುದು ಸಂತೋಷದ ಸಂಗತಿ, ಇಂದಿನ ಮಾಹಿತಿ ಯುಗದ ಕಾಲದಲ್ಲಿ ವಿದ್ಯಾರ್ಥಿಗಳು ತಮ್ಮನ್ನು ಉನ್ನತೀಕರಿಸಿಕೊಳ್ಳುವ ಅಗತ್ಯವಿದೆ. ಅದಕ್ಕೆ ಲ್ಯಾಪ್‌ಟಾಪ್‌ಗಳು ಸಹಕಾರಿಯಾಗಬಲ್ಲವು ಎಂದರು.
ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳಲ್ಲಿ ಯಶಸ್ವಿಯಾಗಿ ತೊಡಗಿಸಿಕೊಂಡು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದರು. ಕಾಲೇಜಿನ ಪ್ರಾಂಶುಪಾಲ ಹರಿಪ್ರಸಾದ್ ಬಿ. ಶೆಟ್ಟಿ ಮಾತನಾಡಿ, ಇಂದು ಉನ್ನತ ಶಿಕ್ಷಣ ಪಡೆಯುವ ಭಾಗ್ಯ ಸಮಾಜದ ಎಲ್ಲಾ ಸ್ಥರದ ವಿದ್ಯಾರ್ಥಿಗಳಿಗೂ ಲಭ್ಯವಿದ್ದು ಶಿಕ್ಷಣದ ಅವಕಾಶದ ಮೂಲಕ ಮಾನವ ಸಂಪನ್ಮೂಲದ ಅಭಿವೃದ್ಧಿ ಸಾಧ್ಯ ಎಂದರು. ವಿನೋದ್ ಸಾಲ್ಯಾನ್ ವೇದಿಕೆಯಲ್ಲಿದ್ದರು.
ಪ್ರಥಮ ಪದವಿ ವಿದ್ಯಾರ್ಥಿನಿಯರಾದ ಜೊಸ್ವಿಟಾ ಮತ್ತು ಲೆನಿಶಾ ಪ್ರಾರ್ಥಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರವಿ ಎಮ್. ಎನ್. ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ. ಚಂದ್ರಿಕಾ ನಾಯಕ್ ವಂದಿಸಿದರು. ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಕೃಷ್ಣಮೂರ್ತಿ ಎನ್.ಬಿ. ಕಾರ್ಯಕ್ರಮ ನಿರೂಪಿಸಿದರು.