ವಿಟ್ಲ: ತುಳುರಂಗಭೂಮಿ ಕಲಾವಿದ ರಾಜ್ಯ ಪ್ರಶಸ್ತಿ ಪುರಸ್ಕೃತರಾಗಿದ್ದ ದಿ.ಸುರೇಶ್ ರೈ ಪರ್ತಿಪ್ಪಾಡಿಯವರ ಅಭಿಮಾನಿ ಬಳಗ ಹಮ್ಮಿಕೊಂಡಿರುವ ಸ್ಮರಣಾಂಜಲಿ ಕಾರ್ಯಕ್ರಮ ಶನಿವಾರದಂದು ಸಂಜೆ ಕುಡ್ತಮುಗೇರು ವಿನಯಶ್ರೀ ಕ್ರೀಡಾಂಗಣದಲ್ಲಿ ನಡೆಯಲಿದೆ.
ಮೂರು ದಶಕಗಳ ಕಾಲ ತುಳುರಂಗ ಭೂಮಿಯಲ್ಲಿ ಮಿಂಚುತ್ತಿದ್ದ ರಾಜ್ಯಪ್ರಶಸ್ತಿ ಪುರಸ್ಕೃತ ಸುರೇಶ್ ರೈ ಪರ್ತಿಪ್ಪಾಡಿ ಕಳೆದ ವರ್ಷ ಅನಾರೋಗ್ಯದಿಂದ ಮೃತಪಟ್ಟಿದ್ದರು. ಸುರೇಶ್ ರೈಯವರ ನೆನಪಿಗಾಗಿ ಅಭಿಮಾನಿ ಬಳಗವು ಸ್ಮರಣಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಶನಿವಾರ ಸಂಜೆ 5 ಗಂಟೆಗೆ ವಿನಯಶ್ರೀ ಕ್ರೀಡಾಂಗಣದಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಕಣಿಯೂರು ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ ದಿವ್ಯ ಉಪಸ್ಥಿತಯಲ್ಲಿ, ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಳಾಲು ಸುಭಾಶ್ಚಂದ್ರ ಶೆಟ್ಟಿ, ಹಿರಿಯ ರಂಗಭೂಮಿ ಕಲಾವಿದರಾದ ಡಿ.ಎಂ.ಕೆ.ವರ್ಕಾಡಿ, ಪಿ.ಟಿ.ರೈ ಪರ್ತಿಪ್ಪಾಡಿ, ಯುವ ರಂಗಭೂಮಿ ಕಲಾವಿದ ಮಾಂಬಾಡಿ ಸತೀಶ್ ಶೆಟ್ಟಿ ಹಾಗೂ ಚಲನಚಿತ್ರ ನಟಿ ಚೈತ್ರ ಶೆಟ್ಟಿ ಭಾಗವಹಿಸಲಿದ್ದಾರೆ. ಟಿ.ಕೆ.ಭಟ್ ಮತ್ತು ಬಳಗದವರಿಂದ ಸುರೇಶ್ ರೈ ಅಭಿನಯದ ನಾಟಕ ಗೀತೆಗಳ ಗಾಯನ ನಡೆಯಲಿದ್ದು ಬಳಿಕ ಸುರೇಶ್ ರೈ ಅಭಿಮಾನಿ ಬಳಗ ಮತ್ತು ಶಿಷ್ಯರಿಂದ ಸುಂದರ ದೇವಾಡಿಗ ಕೆಮ್ಮಣ್ಣು ವಿರಚಿತ ’ನಾಗ ನಿರೆಲ್’ ತುಳು ಹಾಸ್ಯಮಯ-ಸಾಂಸಾರಿಕ ನಾಟಕ ಪ್ರದರ್ಶನಗೊಳ್ಳಲಿದೆ.