ಕೇರಳ: ಚೀನಾದಲ್ಲಿ ಕಾಡುತ್ತಿರುವ ಕೊರೊನಾ ವೈರಸ್ನ ಸೋಂಕು ಭಾರತದ ಕೇರಳಕ್ಕೂ ಬಂದಿತ್ತು. ಚೀನಾದಿಂದ ಕೇರಳಕ್ಕೆ ಬಂದಿಳಿದಿದ್ದ ಮೂವರು ವಿದ್ಯಾರ್ಥಿಗಳಲ್ಲಿ ಕೊರೊನಾ ಪತ್ತೆಯಾಗಿದ್ದು, ಇದೀಗ ಆ ಮೂರು ರೋಗಿಗಳು ಗುಣಮುಖರಾಗಿದ್ದಾರೆ. ಕೇರಳ ಕೊರೊನಾ ಮುಕ್ತವಾಗುತ್ತಿದೆ ಎಂದು ರಾಜ್ಯದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಹೇಳಿದರು.
ಈ ವಿಚಾರವಾಗಿ ಮಾತನಾಡಿದ ಆರೋಗ್ಯ ಸಚಿವೆ, ‘ವೈರಸ್ನಿಂದ ಮುಕ್ತವಾಗುವಲ್ಲಿ ನಾವು ಮೊದಲ ಹಂತವನ್ನು ಮುಗಿಸಿದ್ದೇವೆ. ಸೋಂಕು ತಗುಲಿದ್ದ ಮೂವರು ವಿದ್ಯಾರ್ಥಿಗಳು ಗುಣಮುಖರಾಗಿದ್ದಾರೆ. ನಾವು ಪ್ರತಿಯೊಂದನ್ನು ನಿಯಮಬದ್ಧವಾಗಿ ಪರಿಪಾಲಿಸಿದ್ದೇವೆ’ ಎಂದು ಹೇಳಿದರು.
ನಾವು ಕೇರಳವನ್ನು ಸಂಪೂರ್ಣವಾಗಿ ಕೊರೊನಾ ಮುಕ್ತ ಎಂದು ಘೋಷಿಸಬಹುದು. ಆದರೆ ನಾವು ಹಾಗೆ ಮಾಡುವುದಿಲ್ಲ. ನಮ್ಮಲ್ಲಿ 3,500 ಜನರಲ್ಲಿ ಕೊರೊನಾ ಇರಬಹುದು ಎಂದು ಶಂಕಿಸಿ 28 ದಿನಗಳ ಕಾಲ ಅವರನ್ನು ಪ್ರತ್ಯೇಕಿಸಿಡಲಾಗಿತ್ತು. ಅವರಲ್ಲಿ ಯಾರೊಬ್ಬರಲ್ಲೂ ವೈರಸ್ ಕಾಣದ ಕಾರಣ ಅವರನ್ನೆಲ್ಲ ಅವರ ಮನೆಗಳಿಗೆ ಕಳಿಸಿದ್ದೇವೆ. ಸದ್ಯ 135 ಜನರನ್ನು ವೈರಸ್ನ ಶಂಕೆಯಿಂದ ಪ್ರತ್ಯೇಕಿಸಿಟ್ಟಿದ್ದೇವೆ ಎಂದು ಅವರು ಹೇಳಿದ್ದಾರೆ.
ಬೇರೆ ಬೇರೆ ದೇಶಗಳಿಂದ ರಾಜ್ಯಕ್ಕೆ ಬರುವ ಪ್ರತಿಯೊಬ್ಬರನ್ನು ರೋಗದ ಲಕ್ಷಣಗಳಿವೆಯೇ ಎಂದು ಪರಿಶೀಲನೆ ಮಾಡಲಾಗುತ್ತಿದೆ. ಇತ್ತೀಚೆಗೆ ಮಲೇಷಿಯಾದಿಂದ ಬಂದ ಒಬ್ಬ ವ್ಯಕ್ತಿಯಲ್ಲಿ ಥಂಡಿ ಮತ್ತು ಜ್ವರ ಕಾಣಿಸಿಕೊಂಡಿದೆ. ಆತನ ರಕ್ತವನ್ನು ತಪಾಸಣೆಗೆ ಕಳುಹಿಸಲಾಗಿದ್ದು, ಆತನನ್ನು ನಿರ್ಬಂಧಿಸಿಡಲಾಗಿದೆ. ಇಂದು ಆತನ ವೈದ್ಯಕೀಯ ವರದಿ ಬರುವ ನಿರೀಕ್ಷೆಯಿದೆ ಎಂದು ಸಚಿವೆ ತಿಳಿಸಿದರು