ವಿಟ್ಲ: ಕೇಪು ಗ್ರಾಮದ ಅಜ್ಜಿನಡ್ಕ ಎಂಬಲ್ಲಿಯ ಕೊರಗರ ಮನೆಗಳಿಗೆ ರಸ್ತೆ ನಿರ್ಮಿಸುವಂತೆ ಆಗ್ರಹಿಸಿ ಮಾರ್ಚ್ 2ರಂದು ದ.ಕ ದಲಿತ್ ಸೇವಾ ಸಮಿತಿ ವತಿಯಿಂದ ಕೇಪು ಗ್ರಾಮ ಪಂಚಾಯಿತಿ ವಠಾರದಲ್ಲಿ ಟೆಂಟ್ ನಿರ್ಮಿಸಿ ವಾಸ್ತವ್ಯ ಹೂಡುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡು ತಿಳಿಸಿದರು.
ಅವರು ವಿಟ್ಲದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅಜ್ಜಿನಡ್ಕ ಎಂಬಲ್ಲಿರುವ ಮೂರು ಕೊರಗರ ಮನೆಗಳಿಗೆ ಮತ್ತು ಅಂಗವಿಕಲ ಕೃಷ್ಣಪ್ಪ ಅವರ ಮನೆಗಳಿಗೆ ರಸ್ತೆ ನಿರ್ಮಿಸಿ ಕೊಡುವಂತೆ ಹಲವಾರು ವರ್ಷಗಳಿಂದ ಮನವಿ ಸಲ್ಲಿಸಲಾಗಿದೆ. ಪ್ರತಿಭಟನೆಯೂ ನಡೆಸಲಾಗಿದೆ. ಪರಿಶಿಷ್ಟ ಜಾತಿ ಕುಂದುಕೊರತೆ ಸಭೆಯಲ್ಲಿ ತಿಳಿಸಿದರೂ ಯಾವುದೇ ನ್ಯಾಯ ಒದಗಿಸಿಲ್ಲ. ಈ ಹಿನ್ನೆಲೆಯಲ್ಲಿ ಫೆ.29ರೊಳಗೆ ನ್ಯಾಯ ಒದಗಿಸದಿದ್ದಲ್ಲಿ ಮಾರ್ಚ್ 2ರಂದು ಮೂರು ಕುಟುಂಬಗಳು ಹಾಗೂ ಕೃಷ್ಣಪ್ಪ ಅವರನ್ನು ಗ್ರಾಮ ಪಂಚಾಯಿತಿ ವಠಾರದಲ್ಲಿ ಟೆಂಟ್ ಹಾಕಿ ಪ್ರತಿಭಟನೆ ನಡೆಸುವ ಮೂಲಕ ವಾಸ್ತವ್ಯ ಹೂಡಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಾಣೆಮಂಗಳೂರು ಹೋಬಳಿ ಅಧ್ಯಕ್ಷ ನಾಗೇಶ್, ಬಂಟ್ವಾಳ ತಾಲ್ಲೂಕು ಅಧ್ಯಕ್ಷ ಗಣೇಶ್ ಸೀಗೆಬಲ್ಲೆ, ಮಂಗಳೂರು ತಾಲ್ಲೂಕು ಗೌರವಾಧ್ಯಕ್ಷ ಜಗದೀಶ, ರಮೇಶ್ ಅಜ್ಜಿನಡ್ಕ ಉಪಸ್ಥಿತರಿದ್ದರು.