


ವಿಟ್ಲ: ಆಯುಷ್ಮಾನ್ ಯೋಜನೆಯ ಫಲಾನುಭವಿಗಳಿಗೆ ಸರಕಾರದ ಚಿಕಿತ್ಸಾ ವೆಚ್ಚ ಬರುತ್ತಿಲ್ಲ. ಕುದ್ದುಪದವು ಮೆಸ್ಕಾಂ ಸಬ್ಸ್ಟೇಶನ್ ನಿರ್ಮಾಣಕ್ಕೆ ಸರಕಾರಿ ಸ್ಥಳ ಗುರುತಿಸುವಿಕೆ ಅವಶ್ಯಕವಾಗಿ ಆಗಬೇಕು ಎಂದು ಕೇಪು ಗ್ರಾಮ ಸಭೆಯಲ್ಲಿ ಬೇಡಿಕೆ ಪ್ರಸ್ತಾಪವಾಯಿತು.
ಬುಧವಾರ ಕೇಪು ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆದ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರಾನಾಥ ಆಳ್ವ ಕುಕ್ಕೆಬೆಟ್ಟು ಗ್ರಾಮ ಕರಣಿಕರಲ್ಲಿ ಕುದ್ದುಪದವು ಮೆಸ್ಕಾಂ ಸಬ್ಸ್ಟೇಶನ್ ಈ ಭಾಗಕ್ಕೆ ಅವಶ್ಯಕವಾಗಿದ್ದು, ಅದರ ನಿರ್ಮಾಣಕ್ಕಾಗಿ ಕೂಡಲೇ ಕೇಪು ಗ್ರಾಮ ವ್ಯಾಪ್ತಿಯ ಸರಕಾರಿ ಜಾಗ ಗುರುತಿಸುವಿಕೆ ಅವಶ್ಯಕವಾಗಿದೆ. ಕೊಲ್ಲಪದವು ಅಡ್ಕ ಎಂಬಲ್ಲಿ ಜಾಗವಿದ್ದು, ಅದರ ಗುರುತಿಸುವಿಕೆ ಕಾರ್ಯ ಶೀಘ್ರವಾಗಿ ನಡೆಸಿ, ವರದಿ ಕಳುಹಿಸಬೇಕೆಂದು ತಿಳಿಸಿದರು.
ಕೇಪು ಗ್ರಾ.ಪಂ. ಮಾಜಿ ಅಧ್ಯಕ್ಷ ಬಾಲಚಂದ್ರ ಕಟ್ಟೆ ಆರೋಗ್ಯ ಇಲಾಖೆಯ ಮಾಹಿತಿಯ ಬಳಿಕ ಆಯುಷ್ಮಾನ್ ಭಾರತ್ ಯೋಜನೆ ಸದ್ವಿನಿಯೋಗವಾಗಿಲ್ಲ. ಈ ಬಗ್ಗೆ ಇಲಾಖೆ ಗಂಭೀರವಾಗಿ ಗಮನಹರಿಸಲು ನಿರ್ಣಯ ಕೈಗೊಳ್ಳಬೇಕೆಂದು ತಿಳಿಸಿದರು.
ಕೇಪು ಗ್ರಾಮದ ಅಡ್ಯನಡ್ಕ ಪೇಟೆಯಿಂದ ಕೆಳಗೆ ಸಣ್ಣಮೂಲೆ ಪಾದೆ ಎಂಬಲ್ಲಿ ಕರ್ನಾಟಕ ಹಾಗೂ ಕೇರಳ ರಾಜ್ಯದ ಗಡಿ ಗುರುತು ಸರಿಯಾಗಿ ಗೊತ್ತಾಗದೆ ಜನರು ಪರದಾಡುವಂತಾಗಿದೆ. ಈ ಬಗ್ಗೆ ಸರಕಾರ ಭೂ ಮಾಪನಾ ಇಲಾಖೆಯಿಂದ ಗಡಿ ಗುರುತು ಮಾಡಿಕೊಡುವಂತೆ ಇಲಾಖೆಗೆ ಬರೆಯುವಂತೆ ನಿರ್ಣಯಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಾತೃ ಪೂರ್ಣ ಯೋಜನೆಯ ಸೌಲಭ್ಯವನ್ನು ಪಡೆಯಲು ತುಂಬಿದ ಗರ್ಭಿಣಿಯರಿಗೆ ಕಷ್ಟ ಆಗುತ್ತಿದ್ದು ಇದನ್ನು ಅವರ ಮನೆಗೆ ಕೊಡುವಂತ ವ್ಯವಸ್ಥೆ ಆಗಬೇಕಿದೆ ಎಂಬ ಅಭಿಪ್ರಾಯ ಕೇಳಿ ಬಂದಿತು.
ನಾನಾ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ನೋಡೆಲ್ ಅಧಿಕಾರಿಯಾಗಿ
ಬಂಟ್ವಾಳ ಪಶುವೈದ್ಯ ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ. ಹೆನ್ರಿ ಲಸ್ರಾದೊ ಭಾಗವಹಿಸಿದ್ದರು.
ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಯಶಸ್ವಿನಿ ಶಾಸ್ತ್ರಿ ನೆಕ್ಕರೆ, ಸದಸ್ಯರಾದ ಮಾಲತಿ ಬಿ, ಅಬ್ದುಲ್ ಕರೀಂ ಕುದ್ದುಪದವು, ಕೇಶವ ಉಪಾಧ್ಯಾಯ ಮಣಿಮುಂಡ, ರತ್ನಾ ಕಲ್ಲಂಗಳ, ನಿರಂಜನ ಕಲ್ಲಪಾಪು, ದಿವ್ಯಾ ಮೈರ, ಶಶಿಕಲಾ ಖಂಡಿಗ, ರೇಖಾ ದೇವುಮೂಲೆ, ಹರೀಶ್ ನಾಯ್ಕ ಖಂಡಿಗ, ವಿಠಲ ನಾಯ್ಕ ಕೋಪ್ರೆ, ಪುಷ್ಪಾಕರ ರೈ ಚೆಲ್ಲಡ್ಕ, ಲತಾ ಅತಿಕ್ರಾಯಬೈಲು, ದಯಾನಂದ ಬೀಜದಡ್ಕ ಉಪಸ್ಥಿತರಿದ್ದರು.
ಗ್ರಾಮ ಪಂಚಾಯಿತಿ ಪಿಡಿಒ ನಳಿನಿ ರೈ ಬಿ. ಸ್ವಾಗತಿಸಿದರು. ಗ್ರಾ.ಪಂ. ಗುಮಾಸ್ತ ಸುರೇಶ್ ನಾಯ್ಕ ಕೋಡಂದೂರು ಆಡಳಿತ ವರದಿ ನೀಡಿದರು. ಬಿಲ್ಕಲೆಕ್ಟರ್ ಚಂದ್ರಶೇಖರ ಗುತ್ತುದಡ್ಕ ವಂದಿಸಿದರು. ಸಿಬ್ಬಂದಿಗಳಾದ ಸುಧಾಕರ, ರಮೇಶ, ಗ್ರಂಥಪಾಲಕಿ ಭವ್ಯಾ ಸಹಕರಿಸಿದರು.


