ಬಂಟ್ವಾಳ: ದೈವಸ್ಥಾನವೊಂದರ ಕಾಣಿಕೆ ಡಬ್ಬಿ ಕಳವು ಮಾಡಿದ ಬಗ್ಗೆ ವಿಟ್ಲ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ವೀರಕಂಬ ಗ್ರಾಮದ ಕೆಲಿಂಜ ಉಳ್ಳಾಲ್ತಿ ದೈವಸ್ಥಾನದ ತಾಮ್ರದ ಕಾಣಿಕೆ ಡಬ್ಬಿ ಕಳವು ಅಗಿರುವ ಬಗ್ಗೆ ದೈವಸ್ಥಾನದ ಆಡಳಿತ ಮೋಕ್ತೇಸರ ಪುಂಡಿಕಾಯಿ ಶಂಕರನಾರಾಯಣ ಭಟ್ ಠಾಣೆಗೆ ದೂರು ನೀಡಿದ್ದಾರೆ.
ಫೆ.15 ಕಳವು ನಡೆದಿದ್ದ ಫೆ.19 ರಂದು ವಿಟ್ಲ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಿಸಿ.ಟಿವಿ ದೃಶ್ಯ ವೈರಲ್:
ವ್ಯಕ್ತಿಯೋರ್ವ ಕಾಣಿಕೆ ಡಬ್ಬಿ ಕಳವು ಮಾಡುವ ದೃಶ್ಯ
ಸಿ.ಸಿ.ಟಿ.ವಿಯಲ್ಲಿ ಸೆರೆಯಾಗಿದ್ದು ಅದು ಈಗ ವೈರಲ್ ಆಗಿದೆ.
ಫೆ.14 ರಂದು ಇಲ್ಲಿನ ವಾರ್ಷಿಕ ಜಾತ್ರೆ ನಡೆದಿದ್ದು, ಬಳಿಕ ಮರುದಿನ ದೈವಸ್ಥಾನದಲ್ಲಿ ಸ್ವಚ್ಚತಾ ಕಾರ್ಯಗಳು ನಡೆಯುತ್ತಿತ್ತು.
ಇದೇ ಸಂದರ್ಭದಲ್ಲಿ ವ್ಯಕ್ತಿಯೋರ್ವ ಗೋಣಿಚೀಲ ಕೈಯಲ್ಲಿ ಹಿಡಿದು ಬರುವುದು ಬಳಿಕ ಆತ ದೇವಸ್ಥಾನದ ಮೆಟ್ಟಲಿಗೆ ಕೈ ಮುಗಿಯುವ ನಾಟಕವಾಡಿ ಅಡ್ಡ ಬೀಳುತ್ತಾನೆ. ಅದೇ ಹೊತ್ತಿಗೆ ಅಲ್ಲಿ ಇನ್ನೋರ್ವ ವ್ಯಕ್ತಿ ಇರುವುದನ್ನು ಗಮನಿಸಿ ಅ ವ್ಯಕ್ತಿ ಸುಮಾರು ಹೊತ್ತು ಅಡ್ಡ ಬಿದ್ದು ಇರುತ್ತಾನೆ. ಆತ ಅಲ್ಲಿಂದ ಹೋಗಿದ್ದಾನೆ ಎಂದು ಗೊತ್ತಾದಾಗ ಎದ್ದು ಮೆಟ್ಟಿಲಿನಲ್ಲಿದ್ದ ಕಾಣಿಕೆ ಡಬ್ಬಿಯನ್ನು ಗೋಣಿ ಚೀಲದಲ್ಲಿ ತುಂಬಿಸಿ ಅಲ್ಲಿಂದ ಕಾಲ್ಕಿತ್ತುವ ದೃಶ್ಯ ಸಿಸಿ.ಟಿ.ವಿಯಲ್ಲಿ ಸೆರೆಯಾಗಿದೆ.
ಈ ಕಾಣಿಕೆ ಡಬ್ಬಿಯಲ್ಲಿ ಸುಮಾರು 20 ಸಾವಿರದಿಂದ 22 ಸಾವಿರದ ವರಗೆ ಇರಬಹುದು ಎಂಬ ದೂರು ನೀಡಿದ್ದಾರೆ.
ಸ್ಥಳಕ್ಕೆ ವಿಟ್ಲ ಠಾಣಾ ಎಸ್.ಐ. ವಿನೋದ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.