ಬಂಟ್ವಾಳ: ಇತಿಹಾಸ ಪ್ರಸಿದ್ಧ ಭೂಕೈಲಾಸ ಪ್ರತೀತಿಯ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕಾರಿಂಜ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ, ಜಾತ್ರೋತ್ಸವ ಸಂಪನ್ನಗೊಂಡಿತು.
ಕ್ಷೇತ್ರದ ಅರ್ಚಕರಾದ ಬಾಲಕೃಷ್ಣ ಆಚಾರ್ಯ, ಮಿಥುನ್ ರಾಜ್ ನಾವಡ, ರಾಘವೇಂದ್ರ ಭಟ್ ಕೊಡಂಬೆಟ್ಟು ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ಚಂದ್ರ ಮಂಡಲ ಉತ್ಸವದ ಪ್ರಯುಕ್ತ ಬೆಳಗ್ಗೆ ಶ್ರೀ ಪಾರ್ವತಿ ಸನ್ನಿಽಯಲ್ಲಿ ದರ್ಶನಬಲಿ, ಮಧ್ಯಾಹ್ನ ಮಹಾಪೂಜೆ,ಅನ್ನಸಂತರ್ಪಣೆ ನಡೆಯಿತು. ರಾತ್ರಿ ಬಲ್ಲೋಡಿ ಮಾಗಣೆ ಗುತ್ತಿನಿಂದ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಆಗಮಿಸಿತು. ರಾತ್ರಿ ಜಾತ್ರೋತ್ಸವದಲ್ಲಿ ಪ್ರಮುಖ ಆಕರ್ಷಣೆಯಾಗಿರುವ ಪಾರ್ವತಿ-ಪರಮೇಶ್ವರ ದೇವರ ಭೇಟಿ ನಡೆಯಿತು. ಬಳಿಕ ಚಂದ್ರ ಮಂಡಲ ಉತ್ಸವ, ಬೆಳಗ್ಗೆ ಶಯನೋತ್ಸವ ಕವಾಟ ಬಂಧನ,ಪ್ರಸಾದ ವಿತರಣೆ ನಡೆಯಿತು.
ರವಿವಾರ ಮಧ್ಯಾಹ್ನ ಗದಾತೀರ್ಥ ಕೆರೆಯ ಬದಿಯ ವಿಶಾಲ ಮೈದಾನದಲ್ಲಿ ಮಹಾರಥೋತ್ಸವ ನಡೆಯಿತು. ರಥೋತ್ಸವ ಸಮಯದಲ್ಲಿ ಶ್ರೀ ಕೊಡಮಣಿತ್ತಾಯ ದೈವದ ನೇಮ ನಡೆಯಿತು. ಬಳಿಕ ದೇವರು ದೇವಸ್ಥಾನಕ್ಕೆ ಹಿಂತಿರುಗಿ ಮಹಾಪೂಜೆ ನಂತರ ಮಹಾ ಅನ್ನಸಂತರ್ಪಣೆ ನಡೆಯಿತು.
ಮಹಾಶಿವರಾತ್ರಿ ಜಾತ್ರೋತ್ಸವಕ್ಕೆ ಜನ ಸಾಗರ ಹರಿದು ಬಂದಿತ್ತು. ಸಾವಿರಾರು ಭಕ್ತಾಽಗಳು ದೇವರ ಭೇಟಿ ಹಾಗೂ ಮಹಾರಥೋತ್ಸವದಲ್ಲಿ ಪಾಲ್ಗೊಂಡರು. ಮಧ್ಯಾಹ್ನ ಮಹಾ ಅನ್ನ ಸಂತರ್ಪಣೆ ನಡೆದು ಭಕ್ತಾದಿಗಳು ಅನ್ನ ಪ್ರಸಾದ ಸ್ವೀಕರಿಸಿದರು.
ಮಾಜಿ ಸಚಿವ ಬಿ.ರಮಾನಾಥ ರೈ, ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ವೆಂಕಟೇಶ್, ಆಡಳಿತಾಽಕಾರಿ ನೋಣಯ್ಯ ನಾಯ್ಕ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಪಿ.ಜಿನರಾಜ ಆರಿಗ, ಶಿವಪ್ಪ ಗೌಡ, ಜಿ.ಪಂ.ಸದಸ್ಯ ಬಿ.ಪದ್ಮಶೇಖರ ಜೈನ್, ಕಾವಳಮೂಡೂರು ಪಂ.ಅ.ಅಽಕಾರಿ ವೇದವ, ಪ್ರಮುಖರಾದ ವೆಂಕಟರಮಣ ಮುಚ್ಚಿನ್ನಾಯ, ಗಣಪತಿ ಮುಚ್ಚಿನ್ನಾಯ, ಕಚೇರಿ ಮೆನೇಜರ್ ಸತೀಶ್ ಪ್ರಭು ಮತ್ತು ಸಿಬಂದಿ ವರ್ಗ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಶಿವ-ಪಾರ್ವತಿ ಸಮಾಗಮ
ಜಾತ್ರೋತ್ಸವದ ಸಂದರ್ಭದಲ್ಲಿ ಮಧ್ಯರಾತ್ರಿ ನಡೆಯುವ ಪಾರ್ವತಿ-ಪರಮೇಶ್ವರರ ಭೇಟಿ ಅದ್ಭುತವಾದ ದೃಶ್ಯವನ್ನು ಸಾದರ ಪಡಿಸುತ್ತದೆ.ಈ ಸೌಂದರ್ಯ ರಸಾಧನೆಗಾಗಿ ಭಕ್ತರು ತವಕದಿಂದ ಕಾದಿರುತ್ತಾರೆ.ಶಿವ-ಪಾರ್ವತಿಯರ ಸಮಾಗಮ ಆದರ್ಶ ಕಲ್ಪನೆಯಾಗಿ ಲೌಕಿಕ ಜೀವನದಿಂದ ಪಾರಮಾರ್ಥಿಕ ಜೀವನಕ್ಕೆ ಕೊಂಡೊಯ್ಯುವ ಭಾವುಕ ಸನ್ನಿವೇಶ ನಿರ್ಮಾಣ ವಾಗುತ್ತದೆ.ಶಿವಪಾರ್ವತಿಯರ ಒಂದು ರಾತ್ರಿಯ ಪವಿತ್ರವಾದ ಶಯನೋತ್ಸವ ಬಳಿಕ ಜೊತೆಯಾಗಿ ರಥಬೀದಿಗಿಳಿದು ರಥೋತ್ಸವ ನೆರವೇರಿಸಿ ತಿರುಗಿ ತಮ್ಮ ನೆಲೆಯನ್ನು ಸೇರುವ ಸಂದರ್ಭ ವೈಭವಯುತವಾದುದು.ಆದುದರಿಂದ ಇಲ್ಲಿ ಶಯನಸೇವೆ ಸಲ್ಲಿಸಿದವರಿಗೆ ವಿವಾಹ ಯೋಗ, ಸಂತತಿ ಪ್ರಾಪ್ತಿಯ ನಂಬಿಕೆ ಇದೆ.