


ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಫೆ.17ರಂದು ಸಶಕ್ತ ಭಾರತಕ್ಕೆ ಸದೃಢ ಹೆಜ್ಜೆಗಳು ಎಂಬ ವಿಚಾರದಲ್ಲಿ ರಾಷ್ಟ್ರಮಟ್ಟದ ವಿಚಾರಸಂಕಿರಣ ನಡೆಯಲಿದ್ದು, ಬೆಳಗ್ಗೆ 9.45ರಿಂದ ಸಂಜೆ 4ರವರೆಗೆ ಉಪನ್ಯಾಸಗಳು ನಡೆಯಲಿವೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಕಲ್ಲಡ್ಕ ವಿದ್ಯಾಕೇಂದ್ರದಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವೇದವ್ಯಾಸ ಸಭಾಭವನದಲ್ಲಿ ನಡೆಯುವ ಕಾರ್ಯಕ್ರಮದ ದಿಕ್ಸೂಚಿ ಭಾಷಣದಲ್ಲಿ ವಿಚಾರಸಂಕಿರಣದ ಅಗತ್ಯ ಮತ್ತು ಅನಿವಾರ್ಯತೆ ಕುರಿತು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮಾಡಲಿದ್ದಾರೆ. ಬಳಿಕ ಪೌರತ್ವ ತಿದ್ದುಪಡಿ ಕಾಯ್ದೆ ಘಟನೆಗಳ ಸುತ್ತಮುತ್ತಲಿನ ವಿಶ್ಲೇಷಣೆಯನ್ನು ಕಲಾವಿದೆ, ನ್ಯಾಯವಾದಿ, ಸಾಮಾಜಿಕ ಕಾರ್ಯಕರ್ತೆ ಮಾಳವಿಕಾ ಅವಿನಾಶ್ ವಿವರಿಸಲಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸಶಕ್ತ ಭಾರತ, ಆರ್ಥಿಕತೆ ಮತ್ತು ರಕ್ಷಣೆಯ ಪಾತ್ರದ ಕುರಿತು ಮಾತನಾಡುವರು. ಅಪರಾಹ್ನ ನಡೆಯುವ ಗೋಷ್ಠಿಯಲ್ಲಿ ಚಿಂತಕ, ವಿಮರ್ಶಕ ಮತ್ತಿಘಟ್ಟ ಚೈತ್ರ ಜನಸಂಖ್ಯೆ ಲಾಭವೇ, ಅಪಾಯವೇ ಎಂಬ ಕುರಿತು ಮಾತನಾಡುವರು. ಅಪರಾಹ್ನ ನಡೆಯುವ ಸಮಾರೋಪದಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ಅವರು ಬೌದ್ಧಿಕ ದಾಸ್ಯ ಮೇಲೇಳುತ್ತಿದೆಯೇ ಭಾರತ ಎಂಬ ವಿಚಾರದ ಕುರಿತು ಮಾತನಾಡುವರು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಸುಮಾರು 1 ಸಾವಿರದಷ್ಟು ಪ್ರತಿನಿಧಿಗಳು ಭಾಗವಹಿಸುವ ನಿಟ್ಟಿನಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಎಲ್ಲರಿಗೂ ಉಚಿತ ಪ್ರವೇಶ ಕಲ್ಪಿಸಲಾಗಿದೆ. ವಿಚಾರಗೋಷ್ಠಿಯಲ್ಲಿ ವಕೀಲರು, ವೈಧ್ಯೆಯರು ಸಹಿತ ಸಮಾಜದ ನಾನಾ ಸ್ತರಗಳ ಗಣ್ಯರಿಗೂ ಪಾಲ್ಗೊಳ್ಳಲು ಅವಕಾಶವಿದ್ದು, ಆಸಕ್ತರು ಮುಂಚಿತವಾಗಿಯೇ ಸಂಘಟಕರನ್ನು ಸಂಪರ್ಕಿಸುವಂತೆ ಡಾ. ಭಟ್ ಮನವಿ ಮಾಡಿದರು.
ಒಂದು ಸಂಸ್ಥೆಯಿಂದ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗದ ನಾಲ್ಕು ವಿದ್ಯಾರ್ಥಿಗಳು ಹಾಗೂ ಓರ್ವ ಪ್ರಾಧ್ಯಾಪಕರು ಭಾಗವಹಿಸಬಹುದು. ಮಂಗಳೂರು ವಿವಿ ಹೊರತುಪಡಿಸಿ, ಇತರ ವಿವಿ ಹಾಗೂ ಅನ್ಯರಾಜ್ಯ ಪ್ರತಿನಿಧಿಗಳು ಆಗಮಿಸುವುದಿದ್ದರೆ, ಮುಂಚಿತವಾಗಿ ಸೂಚಿಸಿದಲ್ಲಿ ವಸತಿ ವ್ಯವಸ್ಥೆ ಮಾಡಲಾಗುವುದು. ಪ್ರತಿ ಅವಧಿಯಲ್ಲಿ ಪ್ರಶ್ನೋತ್ತರಕ್ಕೆ ಅವಕಾಶವಿದ್ದು, ಭಾಗವಹಿಸುವವರಿಗೆ ಒಒಡಿ, ಪ್ರಮಾಣಪತ್ರ ನೀಡಲಾಗುವುದು. ಭಾಗವಹಿಸುವಿಕೆ ಕುರಿತು 9980540907 ಮತ್ತು ಹೆಚ್ಚಿನ ಮಾಹಿತಿಗೆ 9964280734 ಸಂಪರ್ಕಿಸಬಹುದು ಎಂದು ಪ್ರಿನ್ಸಿಪಾಲ್ ಕೃಷ್ಣಪ್ರಸಾದ್ ಕಾಯರ್ ಕಟ್ಟೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿದ್ಯಾಕೇಂದ್ರದ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ನಾಗೇಶ್ ಇರಾ, ಪ್ರಿನ್ಸಿಪಾಲ್ ಕೃಷ್ಣಪ್ರಸಾದ್ ಕಾಯರ್ ಕಟ್ಟೆ, ಉಪನ್ಯಾಸಕ ಅಭಿಷೇಕ್ ಉಪಸ್ಥಿತರಿದ್ದರು.


