Saturday, October 28, 2023

ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳು ಕ್ರೀಡೆಯಲ್ಲಿ ಮುಂಚೂಣಿಯಲ್ಲಿರುವುದು ನಮ್ಮ ಕ್ರೀಡಾಲೋಕಕ್ಕೆ ಸಲ್ಲಬೇಕಾದ ಗೌರವ- ಡಾ| ಕಿಶೋರ್ ಕುಮಾರ್ ಸಿ.ಕೆ.

Must read

ಬಂಟ್ವಾಳ: ಕ್ರೀಡೆಯು ಜೀವನದ ಒಂದು ಅವಿಭಾಜ್ಯ ಅಂಗ. ಇದರಿಂದ ಜೀವನ ಮೌಲ್ಯವು ಹೆಚ್ಚುವುದು. ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳೇ ಕ್ರೀಡೆಯಲ್ಲಿ ಮುಂಚೂಣಿಯಲ್ಲಿರುವುದು ನಮ್ಮ ಕ್ರೀಡಾಲೋಕಕ್ಕೆ ಸಲ್ಲಬೇಕಾದ ಗೌರವ. ಕ್ರೀಡೆಯು ಸಕಾರಾತ್ಮಕ ಸ್ಪರ್ಧಾ ಮನೋಭಾವವನ್ನು ಪ್ರತೀ ಸ್ಫರ್ಧಾಳುಗಳಲ್ಲಿ ಮೂಡಿಸುವುದರ ಜೊತೆಗೆ ಸೋಲು ಗೆಲುವುಗಳಲ್ಲೂ ಸಮಾನವಾಗಿ ಸ್ವೀಕರಿಸಿ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ|ಕಿಶೋರ್ ಕುಮಾರ್ ಸಿ.ಕೆ. ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಮಹಿಳಾ ವಾಲಿಬಾಲ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.
ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ ದಶಮಾನೋತ್ಸವದ ಅಂಗವಾಗಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಮಹಿಳಾ ವಾಲಿಬಾಲ್ ಪಂದ್ಯಾಟ ಶ್ರೀರಾಮ ಪದವಿ ಕಾಲೇಜಿನ ಆವರಣದಲ್ಲಿ ಉದ್ಘಾಟನೆಗೊಂಡಿತು.

ವಾಲಿಬಾಲ್ ಕ್ರೀಡಾಂಗಣ ಉದ್ಘಾಟಿಸಿ, ಮಾತನಾಡಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ|ಪ್ರಭಾಕರ ಭಟ್ ಕಲ್ಲಡ್ಕ, ಯಾವುದೇ ಉತ್ತಮ ಕೆಲಸ ಮಾಡುವ ಮೊದಲು ಮಾನಸಿಕವಾಗಿ ಮತ್ತು ದೈಹಿಕವಾಗಿ ಸುದೃಢವಾಗಲು ಕ್ರೀಡೆ ಅಗತ್ಯ. ವಿಶ್ವದ ಯಾವುದೇ ದೇಶದಲ್ಲೂ ಭಾರತೀಯ ಮಹಿಳೆಯರಂತೆ ದೇಶಕ್ಕಾಗಿ ಹೋರಾಡಿದ ಇತಿಹಾಸವೇ ಇಲ್ಲ. ಅಂತೆಯೇ ನಮ್ಮ ಮಹಿಳೆಯರು ಪುರುಷರಿಗೆ ಸಮಾನ ರೀತಿಯಲ್ಲಿ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸುವುದು ಹೆಮ್ಮೆಯ ವಿಚಾರ ಎಂದು ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು. ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಸಹ ನಿರ್ದೇಶಕ ಡಾ| ಪ್ರಸನ್ನ ಬಿ.ಕೆ., ಸಂಸ್ಥೆಯ ಆಡಳಿತ ಸಮಿತಿ ಸದಸ್ಯ ಗೋಪಾಲ ಶೆಣೈ, ಪದವಿ ವಿಭಾಗದ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ನಾಗೇಶ್ ಪೂಜಾರಿ ಇರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅತಿಥಿ ಅಭ್ಯಾಗತರನ್ನು ಚೆಂಡೆ ವಾದನದ ಮೂಲಕ ವಿದ್ಯಾರ್ಥಿಗಳು ಸ್ವಾಗತಿಸಿ ಬರಮಾಡಿಕೊಂಡರು. 23 ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಲಿವೆ.
ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ ಸ್ವಾಗತಿಸಿ, ದೈಹಿಕ ಶಿಕ್ಷಣ ನಿರ್ದೇಶಕ ಕರುಣಾಕರ್ ವಂದಿಸಿ, ರಸಾಯನಶಾಸ್ತ್ರ ಉಪನ್ಯಾಸಕಿ ಕವಿತಾ ನಿರೂಪಿಸಿದರು.

More articles

Latest article