ಬಂಟ್ವಾಳ: ಹಿಂದೂ ಮುಖಂಡ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರದ ಸಂಸ್ಥಾಪಕ, ಪುತ್ತೂರು ವಿವೇಕಾನಂದ ಕಾಲೇಜು ಅಧ್ಯಕ್ಷ ಕಲ್ಲಡ್ಕ ಡಾ. ಪ್ರಭಾಕರ ಭಟ್ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಸಂದೇಶ ಪ್ರಸಾರ ಮಾಡಿರುವ ವ್ಯಕ್ತಿಯ ಮೇಲೆ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳುವಂತೆ ವಿಶ್ವ ಹಿಂದೂ ಪರಿಷತ್ ಭಜರಂಗದಳದ ಕಲ್ಲಡ್ಕ ವಲಯ ಅಧ್ಯಕ್ಷ ಪುಷ್ಪ ರಾಜ್ ಅವರು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಂಗಳೂರು ತಾಲೂಕಿನ ಉಲಾಯಿಬೆಟ್ಟು ಮಂಜಗುಡ್ಡೆ ನಿವಾಸಿ ಸಬೀನ್ ಯಾನೆ ಅಬ್ದುಲ್ ಸಲೀಂ ಅಡ್ಮಿನ್ ಅಗಿರುವ ಕರೆಂಟ್ ಅಫೇರ್ ಎಂಬ ಸುಮಾರು 250 ಸದಸ್ಯರಿರುವ ವಾಟ್ಸಾಪ್ ಗ್ರೂಪ್ ನಲ್ಲಿ ಕಲ್ಲಡ್ಕ ಡಾ. ಪ್ರಭಾಕರ ಭಟ್ ಅವರ ಭಾವಚಿತ್ರವನ್ನು ವಿಕೃತವಾಗಿ ಎಡಿಟ್ ಮಾಡಿ ಪ್ರಸಾರ ಮಾಡಿದ್ದಾನೆ, ಜೊತೆಗೆ ಪ್ರಧಾನಿ ನರೇಂದ್ರ ಮೋದಿ, ಗೃಹಮಂತ್ರಿ ಅಮಿತ್ ಶಾ, ಹಿಂದೂ ಧರ್ಮದ, ಹಿಂದೂ ನಾಯಕರ ಬಗ್ಗೆ ಅವ್ಯಾಚ್ಚ ಶಬ್ದಗಳ ಮೂಲಕ ನಿಂದನೆ ಮಾಡಿದ್ದಾನೆ. ಆರ್.ಎಸ್. ಎಸ್.ಬಗ್ಗೆಯೂ ಅವಹೇಳನಕಾರಿಯಾಗಿ ಅಶ್ಲೀಲ ಪದಗಳನ್ನು ಬರೆದಿದ್ದಾನೆ.
ಇದರ ಜೊತೆಯಲ್ಲಿ ವಿದೇಶದಲ್ಲಿ ಕೆಲಸ ಮಾಡುತ್ತಿರುವ ಹಿಂದೂಗಳಿಗೆ ಬೆದರಿಕೆ ಕರೆ ಮಾಡುವುದಲ್ಲದೆ ಬೇರೆಯವರ ಮೂಲಕ ಬೆದರಿಕೆ ಕರೆ ಮಾಡಿಸುತ್ತಿದ್ದಾನೆ.
ವಿದೇಶದಲ್ಲಿರುವ ಭಾರತೀಯರಿಗೆ ಬೆದರಿಕೆ ಕರೆಯ ಜೊತೆಗೆ ಕೆಲಸ ತೆಗಿಸುವ ಬೆದರಿಕೆಯ ಜೊತೆಗೆ ಮತಾಂಧತೆಯ ದುರ್ವತನೆ ತೋರಿದ್ದಾನೆ. ಈತನಿಗೆ ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿರುವವರ ಜೊತೆ ಸಂಪರ್ಕ ಇದೆ ಎಂಬ ಗುಮಾನಿ ಕೂಡ ಇದೆ, ಇಂತವರಿಂದ ಸಮಾಜದ ಸ್ವಾಸ್ಥ್ಯ ಕೆಡುವುದಲ್ಲದೆ, ಸಾಮರಸ್ಯಕ್ಕೆ ಧಕ್ಕೆಯಾಗುತ್ತದೆ. ಹಾಗಾಗಿ ಈತನ ವಿರುದ್ದ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಇವರು ದೂರಿನಲ್ಲಿ ತಿಳಿಸಿದ್ದಾರೆ.