ಉಜಿರೆ: ಭಕ್ತರ ದೋಷಗಳನ್ನು ಗ್ರಹಣ ಮಾಡಿ, ಸಂಕಷ್ಟಗಳನ್ನು ಪರಿಹರಿಸುವ ಶಕ್ತಿ ಹೊಂದಿರುವ ಸಾನ್ನಿಧ್ಯಗಳು ತೀರ್ಥಕ್ಷೇತ್ರಗಳಾಗಿ ಬೆಳಗುತ್ತವೆ, ಬೆಳೆಯುತ್ತವೆ. ಸಾರ್ಥಕ ಬದುಕಿಗೆದಾರಿದೀಪವಾಗುತ್ತವೆ. ತಮ್ಮಲ್ಲಿರುವ ಕೋಪ, ದ್ವೇಷ, ಅಸೂಯೆ ಮೊದಲಾದ ಅರಿಷಡ್ವರ್ಗಗಳನ್ನು ಕಳಚಿ, ದುಃಖ, ದುಮ್ಮಾನಗಳನ್ನು ಮರೆಯಲು ಧರ್ಮಸ್ಥಳ ಕ್ಷೇತ್ರಕ್ಕೆ ಭಕ್ತರು ಬರುತ್ತಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಗುರುವಾರರಾತ್ರಿ ಧರ್ಮಸ್ಥಳದಲ್ಲಿ ಶಿವರಾತ್ರಿ ಜಾಗರಣೆಗೆ ಬಂದ ಪಾದಯಾತ್ರಿಗಳಿಗೆ ಶುಭಹಾರೈಸಿ ಮಾತನಾಡಿದರು.
ಶಿವ ಭಕ್ತರ ಸರ್ವ ದೋಷಗಳನ್ನು ಸ್ವೀಕರಿಸಿ ವಿಷಕಂಠನಾಗಿ ಭಕ್ತರ ಅಭೀಷ್ಠಗಳನ್ನು ಈಡೇರಿಸಿ ಮಂಗಳಕಾರಕನಾಗಿಯೂ ಸದಾ ಭಕ್ತರನ್ನು ಅನುಗ್ರಹಿಸುತ್ತಾರೆ.
ನೇತ್ರಾವತಿ ನದಿಯಲ್ಲಿ ಮಿಂದು ಬಹಿರಂಗ ಪರಿಶುದ್ಧಿಯೊಂದಿಗೆ, ಉಪವಾಸ, ವ್ರತ-ನಿಯಮಗಳ ಪಾಲನೆಯೊಂದಿಗೆ ಅಂತರಂಗ ಶುದ್ಧಿಯಿಂದ ದೇವರನ್ನು ಪ್ರಾರ್ಥಿಸಿದಾಗ ಸಕಲ ದೋಷಗಳ ನಿವಾರಣೆಯಾಗಿ ಶಾಂತಿ, ನೆಮ್ಮದಿ ನೆಲೆಸುತ್ತದೆ.
ಪ್ರಸ್ತುತ ಮೊಬೈಲ್ ಫೋನ್ ಕಾಟದಿಂದ ಜಪ, ತಪ, ಪ್ರಾರ್ಥನೆ, ಧ್ಯಾನಕ್ಕೂಅಡಚಣೆಯಾಗುತ್ತಿದೆ.ಮನಸ್ಸಿನಲ್ಲಿ ಏಕಾಗ್ರತೆ ಇರುವುದಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಹಿತ-ಮಿತವಾಗಿ ಮೊಬೈಲ್ ಬಳಸಿ ಎಂಬ ಕಿವಿಮಾತನ್ನೂ ಹೇಳಿದರು.
ಅನೇಕ ಮಂದಿ ಪಾದಯಾತ್ರಿಗಳು ಒಂದೆರಡು ದಿನ ಮುಂಚಿತವಾಗಿ ಬಂದು ದೇವರ ದರ್ಶನ ಮಾಡಿ ಇತರ ಭಕ್ತರಿಗೆ ಅನುಕೂಲ ಮಾಡಿದ್ದಾರೆ ಎಂದು ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು.
ಪಾದಯಾತ್ರಿಗಳಲ್ಲಿರುವ ಶಿಸ್ತು, ಸಂಯಮ, ಸ್ವಚ್ಛತೆ ಬಗ್ಯೆ ಕಾಳಜಿ ಇತ್ಯಾದಿಗಳನ್ನು ಹೆಗ್ಗಡೆಯವರು ಶ್ಲಾಘಿಸಿ ಎಲ್ಲರಿಗೂ ಪಾದಯಾತ್ರೆಯ ಫಲ ಸಿಗಲಿ.ಮಳೆ-ಬೆಳೆ ಚೆನ್ನಾಗಿ ಆಗಲಿ. ಎಲ್ಲೆಲ್ಲೂ ಸುಖ-ಶಾಂತಿ, ನೆಮ್ಮದಿ ನೆಲೆಸಲಿ ಹಾಗೂ ಲೋಕಕಲ್ಯಾಣವಾಗಲಿ ಎಂದು ಅವರು ಹಾರೈಸಿದರು.
ಪಾದಯಾತ್ರಿಗಳ ತಂಡದ ನಾಯಕ ಬೆಂಗಳೂರಿನ ಹನುಮಂತಪ್ಪ ಸ್ವಾಮೀಜಿ ಮತ್ತು ಶಶಿಕುಮಾರ್ ಹಾಗೂ ಇತರರನ್ನು ಹೆಗ್ಗಡೆಯವರು ಗೌರವಿಸಿದರು.
ಹನುಂತಪ್ಪ ಸ್ವಾಮೀಜಿ ಮಾತನಾಡಿ ಮುಂದಿನ ವರ್ಷ ಆಯಾ ಊರುಗಳಲ್ಲೆ ಪಾದಯಾತ್ರಿಗಳ ತಂಡ ರಚಿಸಿ, ಸುಗಮ ಪಾದಯಾತ್ರೆ ಮಾಡಬೇಕು ಎಂದು ಸಲಹೆ ನೀಡಿದರು.
ಹೇಮಾವತಿ ವಿ. ಹೆಗ್ಗಡೆಯವರು, ನಾಗರಾಜರೆಡ್ಡಿ ಮತ್ತು ಮರಿಯಪ್ಪ ಗುರು ಮೊದಲಾದವರು ಉಪಸ್ಥಿತರಿದ್ದರು.