ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಮತ್ತು ಪರ ಬಣಗಳ ನಡುವಿನ ಘರ್ಷಣೆ ಮತ್ತು ಹಿಂಸಾಚಾರ, ಈಶಾನ್ಯ ದೆಹಲಿಯಲ್ಲಿನ ಹಿಂಸಾಚಾರದಲ್ಲಿ ಆತಂಕಕಾರಿ ಹಂತ ತಲುಪಿದ ದೆಹಲಿ ಸ್ಥಿತಿ ಈ ವರೆಗೂ 20 ಮಂದಿ ಬಲಿಯಾಗಿದ್ದು , 190 ಮಂದಿ ಗಾಯಗೊಂಡಿದ್ದಾರೆ. ಹೀಗಾಗಿ ಹಿಂಸಾಚಾರದ ಕೇಂದ್ರ ಬಿಂದುವಾಗಿರುವ ಸೀಲಂಪುರದಲ್ಲಿ ಒಂದು ತಿಂಗಳ ಕಾಲ ನಿಷೇಧಾಜ್ಞೆ ಹೇರಲಾಗಿದೆ.
ಈ ಕುರಿತಂತೆ ದೆಹಲಿ ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದೆ ‘ನಿಷೇಧಾಜ್ಞೆ ಹೇರಲಾಗಿರುವ ಸೀಲಂಪುರದಲ್ಲಿ ಯಾರೂ ಕೂಡ ಗುಂಪುಕಟ್ಟುವಂತಿಲ್ಲ. ಪ್ರಸ್ತುತ ನಾವು ಸೌಮ್ಯವಾಗಿ ಈ ಮಾತನ್ನು ಹೇಳುತ್ತಿದ್ದು, ಪರಿಸ್ಥಿತಿ ಕೈಮೀರುವಂತಿದ್ದರೆ, ಯಾವುದೇ ರೀತಿಯ ಕಠಿಣ ಕ್ರಮಕ್ಕೂ ನಾವು ಸಿದ್ಧರಿದ್ದೇವೆ ಎಂದು ಪರೇಡ್ ನಡೆಸಿದ ಪೊಲೀಸ್ ಅಧಿಕಾರಿಗಳು ಸ್ಥಳೀಯ ನಿವಾಸಿಗಳಿಗೆ ಹೇಳಿದ್ದಾರೆ. ಅಂತೆಯೇ ಯಾರೂ ಹೆದರುವ ಅವಶ್ಯಕತೆ ಇಲ್ಲ. ನಿಮಗೆ ಯಾವುದೇ ರೀತಿಯ ತೊಂದರೆಯಾದರೆ ಕೂಡಲೇ ಇಲಾಖೆಯ ಟೋಲ್ ಫ್ರೀ ನಂಬರ್ ಮತ್ತು ತುರ್ತು ಸೇವಾ ನಂಬರ್ ಗೆ ಕರೆ ಮಾಡಬಹುದು. ನಿಮ್ಮ ರಕ್ಷಣೆಗೆ ನಾವು ಸದಾ ಬದ್ಧ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಕಾಯಲು ಸಿಆರ್ ಪಿಎಫ್, ಸಶಸ್ತ್ರ ಸೀಮಾ ಬಲ, ಸಿಐಎಸ್‌ಎಫ್, ಮತ್ತು ದೆಹಲಿ ಪೊಲೀಸರು ಗೋಕುಲ್ ಪುರಿ ಪ್ರದೇಶದಲ್ಲಿ ಫ್ಲಾಗ್ ಮಾರ್ಚ್ ನಡೆಸಿದರು.
ಇನ್ನು ಭಾನುವಾರದಿಂದ ನಡೆಯುತ್ತಿರುವ ಹಿಂಸಾಚಾರದಲ್ಲಿ ಈ ವರೆಗೂ ಕನಿಷ್ಠ 22 ಮಂದಿ ಬಲಿಯಾಗಿದ್ದು, 190ಕ್ಕೂ ಅಧಿಕ ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಲ್ಲದೆ ನೂರಾರು ಕೋಟಿ ರೂ ಮೌಲ್ಯದ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟವಾಗಿದ್ದು, ವಾಹನಗಳು, ಮನೆ, ಅಂಗಡಿಗಳಿಗೆ ಉದ್ರಿಕ್ತರು ಬೆಂಕಿ ಹಚ್ಚಿ ನಾಶ ಮಾಡಿದ್ದಾರೆ.