ನವದೆಹಲಿ: ಶಹೀನ್‌ಬಾಗ್ ಮಾದರಿಯಲ್ಲಿಯೇ ಈಶಾನ್ಯ ದಿಲ್ಲಿಯ ಜಫ್ರಾಬಾದ್ ಮತ್ತು ಮೌಜ್‌ಪುರ ಮೆಟ್ರೋ ನಿಲ್ದಾಣದ ಎದುರು ಕೆಲವರು ಶನಿವಾರ ರಾತ್ರಿಯಿಂದ ಪ್ರತಿಭಟನೆ ನಡೆಸುತ್ತಿದ್ದರು. ಜಾಫರ್‌ಬಾದ್‌ಗೆ ಸಮೀಪ ಸಿಎಎ ಪರವಾಗಿಯೂ ಅನೇಕರು ಧರಣಿ ನಡೆಸುತ್ತಿದ್ದರು. ಭಾನುವಾರ ಎರಡೂ ಬಣಗಳ ನಡುವೆ ಪ್ರಾರಂಭವಾಗಿದ್ದ ಗಲಾಟೆಯಿಂದ ಸಂಘರ್ಷ ಭುಗಿಲೆದ್ದಿತ್ತು.
ನಾಲ್ಕು ದಿನಗಳಿಂದ ಈಶಾನ್ಯ ದೆಹಲಿಯಲ್ಲಿ ಭುಗಿಲೆದ್ದಿರುವ ಹಿಂಸಾಚಾರದಲ್ಲಿ ಸಾವಿನ ಸಂಖ್ಯೆ ಏರಿಕೆಯಾಗಿದೆ. ಇದುವರೆಗೂ ದೆಹಲಿಯ ಸಿಎಎ ಹಿಂಸಾಚಾರಕ್ಕೆ ಒಬ್ಬ ಪೊಲೀಸ್ ಕಾನ್ಸ್‌ಟೇಬಲ್ ಹಾಗೂ ಐಬಿ ಅಧಿಕಾರಿ ಸೇರಿ 34 ಮಂದಿ ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಭಜನ್‌ಪುರ, ಮೌಜ್‌ಪುರ್ ಮತ್ತು ಕಾರವಾಲ್ ಪ್ರದೇಶಗಳಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ದೆಹಲಿ ಪೊಲೀಸರು ಇದುವರೆಗೂ 18ಎಫ್‌ಐಆರ್‌ಗಳನ್ನು ದಾಖಲಿಸಿದ್ದು, ಗಲಭೆಗೆ ಸಂಬಂಧಿಸಿದಂತೆ 106 ಜನರನ್ನು ಬಂಧಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಈಶಾನ್ಯ ದೆಹಲಿಯಲ್ಲಿ ಒಂದು ತಿಂಗಳ ಕಾಲ ನಿಷೇಧಾಜ್ಞೆ ಹೇರಲಾಗಿದೆ.
ಶಾಲಾ-ಕಾಲೇಜುಗಳಿಗೆ ರಜೆ: ಪರೀಕ್ಷೆ ಮುಂದೂಡಲಾಗಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಗುರುವಾರವೂ ಶಾಲಾ-ಕಾಲೇಜುಗಳಿಗೆ ರಜೆ ಮುಂದುವರಿದಿದೆ. 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ಸಹ ಮುಂದೂಡಲಾಗಿದೆ. ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಈ ಕುರಿತು ಹೇಳಿಕೆ ನೀಡಿದ್ದು, ಗಲಭೆ ಪೀಡಿತ ಪ್ರದೇಶದಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ದೆಹಲಿಯ ನಾಲ್ಕು ಭಾಗಗಳಲ್ಲಿ ನಿಷೇಧಾಜ್ಞೆ ಜಾರಿಯಾಗಿದ್ದು,, ಹಿಂಸಾಚಾರ ತಡೆಗಟ್ಟಲು 12 ಪ್ಯಾರಾ ಮಿಲಿಟರಿ ಪಡೆಗಳನ್ನು ನಿಯೋಜನೆ ಮಾಡಲಾಗಿದೆ. ಈ ಮಧ್ಯೆ ಸಿಎಎ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ ಎಂದು ಹೈಕೋರ್ಟ್ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದೆ. ಗಲಭೆ ನಿಯಂತ್ರಣ ಹೊಣೆ ಹೊತ್ತಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನಿನ್ನೆ ಗಲಭೆಗ್ರಸ್ತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದು, ದೆಹಲಿಯ ಜನತೆಗೆ ರಕ್ಷಣೆಯ ಭರವಸೆ ನೀಡಿದ್ದಾರೆ.
ಗೃಹ ಸಚಿವ ಅಮಿತ್ ಶಾ ದೆಹಲಿಯ ಪರಿಸ್ಥಿತಿಯನ್ನು ಸುಧಾರಿಸಲು ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ದೆಹಲಿ ಹಿಂಸಾಚಾರದಲ್ಲಿ ಮೃತಪಟ್ಟ ಮುಖ್ಯ ಪೊಲೀಸ್ ಕಾನ್ಸ್ಟೇಬಲ್ ರತನ್ ಲಾಲ್ ಕುಟುಂಬಕ್ಕೆ ಒಂದು ಕೋಟಿ ರೂ. ನೀಡುವುದಾಗಿ ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದು, ಕುಟುಂಬದ ಸದಸ್ಯರೊಬ್ಬರಿಗೆ ಸರಕಾರಿ ನೌಕರಿ ನೀಡಲಾಗುವುದು ಎಂದಿದ್ದಾರೆ.