ದೆಹಲಿ: ಕಳೆದ 5 ದಿನಗಳಿಂದ ಹಿಂಸಾಚಾರದಿಂದ ನಲುಗಿದ್ದ ರಾಷ್ಟ್ರ ರಾಜಧಾನಿ ನವದೆಹಲಿ ಸಹಜ ಸ್ಥಿತಿಯತ್ತ ಮರಳಿದೆ. ಈಶಾನ್ಯ ದೆಹಲಿಯಲ್ಲಿ ಮೊನ್ನೆ ಫೆಬ್ರವರಿ 23ರಂದು ಸಿಎಎ ವಿರುದ್ಧ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಎರಡು ಗುಂಪುಗಳ ಮಧ್ಯೆ ತೀವ್ರ ಗಲಭೆ, ಕಲ್ಲುತೂರಾಟ ನಡೆದು ರಕ್ತಪಾತವಾಗಿ ಇದುವರೆಗೆ 38 ಜನ ಮೃತಪಟ್ಟಿದ್ದಾರೆ. ಅವರಲ್ಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಮತ್ತು ಗುಪ್ತಚರ ಇಲಾಖೆಯ ಅಧಿಕಾರಿ ಅಂಕಿತ್ ಶರ್ಮ ಕೂಡ ಸೇರಿದ್ದಾರೆ.ಸುಮಾರು 200 ಮಂದಿಗೆ ಗಂಭೀರ ಗಾಯಗಳಾಗಿವೆ.
ಕಳೆದ 36 ಗಂಟೆಗಳಲ್ಲಿ ಈಶಾನ್ಯ ದೆಹಲಿಯಲ್ಲಿ ಯಾವುದೇ ಅಹಿತಕರ ಘಟನೆ ಕಂಡುಬರದ ಹಿನ್ನೆಲೆಯಲ್ಲಿ ಸೆಕ್ಷನ್ 144ರಡಿಯಲ್ಲಿ ಹೇರಲಾಗಿದ್ದ ನಿಷೇಧಾಜ್ಞೆಯನ್ನು ಶುಕ್ರವಾರ 10 ಗಂಟೆಗಳ ಕಾಲ ಸಡಿಲಿಸಲಾಗುವುದು ಎಂದು ಗೃಹ ಸಚಿವಾಲಯ ತಿಳಿಸಿದೆ.
ಈಶಾನ್ಯ ದೆಹಲಿಯ ಭಾಜನ್ ಪುರ, ಕುರೆಜಿ ಖಾಸ್, ಚಾಂದ್ ಬಾಗ್, ಮೊಂಗಾ ನಗರ್ ಮತ್ತು ಕಾರವಾಲ್ ನಗರಗಳಲ್ಲಿ ವಾಹನಗಳು ಸಂಚರಿಸುತ್ತಿದ್ದು, ಅಂಗಡಿ ಮುಂಗಟ್ಟುಗಳು ತೆರಿದಿವೆ. ಅನೇಕ ಅಂಗಡಿಗಳು ಕಳೆದ ರಾತ್ರಿಯವರೆಗೂ ತೆರೆದಿದ್ದವು. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.
ಶಾಂತಿ ಮತ್ತು ಸೌಹಾರ್ದತೆ ಬಗ್ಗೆ ಹಲವು ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ವಿಶೇಷ ಪೊಲೀಸ್ ಆಯುಕ್ತ ಎಸ್. ಎನ್. ಶ್ರೀವಾಸ್ತವ ಹೇಳಿದ್ದಾರೆ.
ಚಾಂದ್ ಬಾಗ್ ಪ್ರದೇಶದ ಕೌನ್ಸಿಲರ್ ತಹೀರ್ ಹುಸೇನ್ ಮನೆ ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದ್ದು, ಡಜನ್ ವಾಹನಗಳಿಗೆ ಬೆಂಕಿ ಹಚ್ಚಿರುವ ದೃಶ್ಯ ಕಂಡುಬಂದಿತ್ತು. ಬಾಜನ್ ಪುರ ದಿಂದ ಕಾರವಾಲ್ ನಗರದವರೆಗೂ ಕಲ್ಲು, ಗಾಜುಗಳು, ಇಟ್ಟಿಗೆಗಳು, ಬೆಂಕಿ ಹಚ್ಚಿದ ವಾಹನಗಳು ಕಂಡುಬಂದವು.