ಇರಾನ್: ಚೀನಾ ದೇಶಕ್ಕೆ ಹಲವು ದಿನಗಳಿಂದ ಕಾಡಿದ ಕೊರೊನಾ ವೈರಸ್ ಈಗ ಇರಾನ್ ಗೆ ಲಗ್ಗೆ ಇಟ್ಟಿದೆ. ಇರಾನ್ ನ ಉಪಾಧ್ಯಕ್ಷರು ಸೇರಿ ದೇಶದಲ್ಲಿ ಒಟ್ಟು 245 ಜನರಿಗೆ ಕೊರೊನಾ ವೈರಸ್ ತಗುಲಿರುವುದು ಧೃಡವಾಗಿದೆ.
ಈ ಕುರಿತಾಗಿ ಸುದ್ದಿಗೋಷ್ಠಿ ನಡೆಸಿರುವ ಇರಾನ್ನ ಆರೋಗ್ಯ ಸಚಿವಾಲಯ, ಒಂದೇ ದಿನದಲ್ಲಿ 106 ಜನರಲ್ಲಿ ವೈರಸ್ ಪತ್ತೆಯಾಗಿದ್ದು, ಇದುವರೆಗೆ ಒಟ್ಟು 245 ಜನರಲ್ಲಿ ವೈರಸ್ ಇರುವುದು ಧೃಡವಾಗಿದೆ ಎಂದು ತಿಳಿಸಿದೆ. 26 ಜನರು ಈ ವೈರಸ್ನಿಂದಾಗಿ ಮೃತರಾಗಿದ್ದಾರೆ ಎಂಬ ಮಾಹಿತಿಯನ್ನು ಕೂಡಾ ಸಚಿವಾಲಯ ಹಂಚಿಕೊಂಡಿದೆ. ಇರಾನ್ನಲ್ಲಿ ಒಟ್ಟು ಏಳು ಉಪಾಧ್ಯಕ್ಷರುಗಳಿದ್ದು, ಅದರಲ್ಲಿ ಮಹಿಳಾ ವ್ಯವಹಾರಗಳ ಮೇಲ್ವಿಚಾರಣೆಯ ಜವಾಬ್ದಾರಿ ಇರುವ ಮಸೌಮೆಹ್ ಎಬ್ಟೆಕರ್ಗೆ ವೈರಸ್ ಸೋಂಕಿದೆ. ಸದ್ಯ ಮಸೌಮೆಹ್ ಎಬ್ಟೆಕರ್ ಅವರಿಗೆ ಮನೆಯಲ್ಲಿಯೇ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರೊಟ್ಟಿಗಿದ್ದ ಅಧಿಕಾರಿ ವರ್ಗದವರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಸಂಸತ್ತಿನ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ವ್ಯವಹಾರಗಳ ಸಮಿತಿಯ ಮುಖ್ಯಸ್ಥ ಮೊಜ್ತಾಬಾ ಜೊಲ್ನೋರ್ ಅವರಿಗೂ ಕೋಡಾ ಸೋಂಕು ತಗುಲಿರುವುದು ವರದಿಯಾಗಿದೆ.