ಬಂಟ್ವಾಳ: ಹಳೆಯ ತಲೆಮಾರಿನ ಹಿರಿಯ ಅರ್ಥಧಾರಿಗಳಾದ ದಿ.ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ದಿ. ಬೊಂಡಾಲ ರಾಮಣ್ಣ ಶೆಟ್ಟಿ ಸ್ಮರಣಾರ್ಥ ನೀಡಲಾಗುವ ‘ಬೊಂಡಾಲ ಪ್ರಶಸ್ತಿ’ಗೆ 2019 20ನೇ ಸಾಲಿನಲ್ಲಿ ಕಟೀಲು ಮೇಳದ ಹಿರಿಯ ಯಕ್ಷಗಾನ ವೇಷಧಾರಿ ರವಿರಾಜ ಪನೆಯಾಲ ಮತ್ತು ಮದ್ದಲೆಗಾರ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರೀ ಆಯ್ಕೆಯಾಗಿದ್ದಾರೆ.
ಫೆ.21ರಂದು ಶುಕ್ರವಾರ ರಾತ್ರಿ ಬಂಟ್ವಾಳ ತಾಲೂಕು ಶಂಭೂರು ಗ್ರಾಮದ ಬೊಂಡಾಲದಲ್ಲಿ ನಡೆಯುವ ಕಟೀಲು ಮೇಳದ ಬಯಲಾಟದ ರಂಗಸ್ಥಳದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಬೊಂಡಾಲ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ತಿಳಿಸಿದ್ದಾರೆ.
ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಬಯಲಾಟ ಸಮಿತಿಯವರು ಪ್ರತಿವರ್ಷದಂತೆ ಈ ಬಾರಿಯೂ ಏರ್ಪಡಿಸಿರುವ ಎರಡು ದಿನಗಳ ಯಕ್ಷೋತ್ಸವ ಕಾರ್ಯಕ್ರಮದಲ್ಲಿ ಬೊಂಡಾಲ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ‘ಬೊಂಡಾಲ ಜನಾರ್ದನ ಶೆಟ್ಟಿ, ರಾಮಣ್ಣ ಶೆಟ್ಟಿ ಸಂಸ್ಮರಣೆ – ಪ್ರಶಸ್ತಿ ಪ್ರದಾನ ಸಮಾರಂಭ’ ಜರಗಲಿದೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅಧ್ಯಕ್ಷತೆ ವಹಿಸುವರು. ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಆಶೀರ್ವಚನ ನೀಡುವರು. ಪ್ರಶಸ್ತಿ ಆಯ್ಕೆ ಸಮಿತಿ ಸಂಚಾಲಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸಂಸ್ಮರಣಾ ಭಾಷಣ ಮಾಡುವರು. ಮಾಜಿ ಸಚಿವ ಬಿ.ರಮಾನಾಥ ರೈ, ಲೆಕ್ಕ ಪರಿಶೋಧಕ ಶಿವಾನಂದ ಪೈ, ಬೊಂಡಾಲ ಸೀತಾರಾಮ ಶೆಟ್ಟಿ ಅತಿಥಿಗಳಾಗಿರುವರು.
ಯಕ್ಷೋತ್ಸವದ ಅಂಗವಾಗಿ ಬೊಂಡಾಲದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಫೆ20 ರಂದು ‘ತುಳಸಿ ಜಲಂಧರ – ಮೀನಾಕ್ಷಿ ಕಲ್ಯಾಣ’ ಹಾಗೂ ಫೆ.21ರಂದು ‘ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಜರಗಲಿದೆ.
ರವಿರಾಜ ಪನೆಯಾಲ: ಕಾಸರಗೋಡು ತಾಲೂಕಿನ ಪನೆಯಾಲದಲ್ಲಿ ದಿ.ಎನ್. ಕೇಶವ ಭಟ್ ಮತ್ತು ಸಾವಿತ್ರಿ ದಂಪತಿಗೆ 1968ರಲ್ಲಿ ಜನಿಸಿದ ರವಿರಾಜ ಭಟ್ ಪಡ್ರೆ ವಾಣಿನಗರದ ಸರಕಾರಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ಕಲಿತು ಯಕ್ಷಗಾನದತ್ತ ಹೊರಳಿದರು.
ಗುರು ಸಬ್ಬಣಕೋಡಿ ರಾಮ ಭಟ್ಟರಲ್ಲಿ ನಾಟ್ಯಾಭ್ಯಾಸ ಮಾಡಿ 1989ರಲ್ಲಿ ಕಟೀಲು ಮೇಳಕ್ಕೆ ಸೇರ್ಪಡೆಗೊಂಡರು. 1997ರಲ್ಲಿ ಮೇಳ ಬಿಟ್ಟು ಕೃಷಿಯನ್ನು ಅವಲಂಬಿಸಿದ ಅವರು ಮರಳಿ 2004ರಲ್ಲಿ ಎಡನೀರು ಮೇಳ ಸೇರಿ ತಮ್ಮ ಯಕ್ಷಗಾನ ಸೇವೆಯನ್ನು ಮುಂದುವರಿಸಿದರು. ಆರಂಭದಲ್ಲಿ ಬಣ್ಣದ ವೇಷಗಳನ್ನೇ ಮಾಡುತ್ತಿದ್ದ ರವಿರಾಜರು,ಬಳಿಕ ಕಿರೀಟ ಹಾಗೂ ನಾಟಕೀಯ ವೇಷಗಳನ್ನು ನಿರ್ವಹಿಸತೊಡಗಿದರು. ಅರ್ಜುನ, ದೇವೇಂದ್ರ, ಭೀಷ್ಮ, ಕರ್ಣ, ಕಂಸ, ಜರಾಸಂಧ, ರಾವಣ, ಶುಂಭ, ಮಹಿಷಾಸುರ, ಅರುಣಾಸುರ ಮುಂತಾದ ಪಾತ್ರಗಳಲ್ಲಿ ಅವರು ಪ್ರಸಿದ್ಧರು. ತಾಳಮದ್ದಳೆ ಕೂಟಗಳಲ್ಲಿ ಅರ್ಥಧಾರಿಯಾಗಿಯೂ ಪನೆಯಾಲರಿಗೆ ಪರಿಶ್ರಮವಿದೆ. ಪತ್ನಿ ದುರ್ಗಾಪರಮೇಶ್ವರಿ ಮತ್ತು ಪುತ್ರ ಚಿನ್ಮಯರನ್ನೊಳಗೊಂಡ ಪುಟ್ಟ ಸಂಸಾರ ರವಿರಾಜರದು. ಇದೀಗ 2015ರಿಂದ ಕಟೀಲು ಮೇಳಕ್ಕೆಮತ್ತೆ ಸೇರ್ಪಡೆಗೊಂಡಿರುವ ಅವರು ತಮ್ಮ ಕಲಾ ವ್ಯವಸಾಯವನ್ನು ಮುಂದುವರಿಸುತ್ತಿದ್ದಾರೆ.
ಮಣಿಮುಂಡ ಸುಬ್ರಮಣ್ಯ ಶಾಸ್ತ್ರಿ: ಮೂಡಿಗೆರೆ ತಾಲೂಕಿನ ಬಣಕಲ್ ನಲ್ಲಿ ಸುಬ್ಬಣ್ಣ ಶಾಸ್ತ್ರಿ ಮತ್ತು ರಮಾದೇವಿ ದಂಪತಿಯ ಪುತ್ರನಾಗಿ ಫೆಬ್ರವರಿ 23, 1966ರಲ್ಲಿ ಜನಿಸಿದ ಮಣಿಮುಂಡ ಸುಬ್ರಹ್ಮಣ್ಯಶಾಸ್ತ್ರಿ ಕಲಿತುದುದು ಏಳನೇ ತರಗತಿ. 1977ರಲ್ಲಿ ಧರ್ಮಸ್ಥಳ ಯಕ್ಷಗಾನ ಕೇಂದ್ರವನ್ನು ಸೇರಿ ಗುರು ಗೋವಿಂದಭಟ್ಟರಿಂದ ನಾಟ್ಯ ಕಲಿತು ವೇಷಧಾರಿಯಾಗಿ ಅವರು ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಧರ್ಮಸ್ಥಳ ಮೇಳದಲ್ಲಿ ಎರಡು ವರ್ಷ ಹಾಗೂ ಸುಂಕದಕಟ್ಟೆ ಮೇಳದಲ್ಲಿ ಒಂದು ವರ್ಷ ನಿತ್ಯ ವೇಷಗಳನ್ನು ಮಾಡುತ್ತಿದ್ದ ಸುಬ್ರಹ್ಮಣ್ಯಶಾಸ್ತ್ರಿ ಮುಂದೆ ಯಕ್ಷಗಾನದ ಹಿಮ್ಮೇಳದತ್ತ ಆಕರ್ಷಿತರಾದರು.ಮರಳಿ ಧರ್ಮಸ್ಥಳ ಕೇಂದ್ರವನ್ನು ಸೇರಿದ ಅವರು ನೆಡ್ಲೆ ನರಸಿಂಹ ಭಟ್ಟರಿಂದ ಚೆಂಡೆ-ಮದ್ದಳೆ ವಾದನವನ್ನು ಅಭ್ಯಸಿಸಿದರು. ಆ ಮೇಲೆ ಪುತ್ತೂರು ಹಾಗೂ ಧರ್ಮಸ್ಥಳ ಮೇಳಗಳಲ್ಲಿ ಎರಡು ವರ್ಷ ತಿರುಗಾಟ ನಡೆಸಿದರು. ಈ ಹಂತದಲ್ಲಿ ಧರ್ಮಸ್ಥಳ ಮೇಳದ ಕಡತೋಕ ಮಂಜುನಾಥ ಭಾಗವತರು ಮತ್ತು ಕೃಷ್ಣಯ್ಯ ಬಲ್ಲಾಳರ ಸಮರ್ಥ ಮಾರ್ಗದರ್ಶನ ಅವರಿಗೆ ಲಭಿಸಿತು.
ತೆಂಕುತಿಟ್ಟಿನ ವಿವಿಧ ಮೇಳಗಳಲ್ಲಿ ಸುಮಾರು ಮೂರೂವರೆ ದಶಕಗಳ ತಿರುಗಾಟದ ಅನುಭವವಿರುವ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿಗಳು ಪ್ರಸ್ತುತ ಕಳೆದ 11 ವರ್ಷಗಳಿಂದ ಕಟೀಲು ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಫೆ.20 ಮತ್ತು 21 ರಂದು ಎರಡು ದಿನ ಬೊಂಡಾಲದಲ್ಲಿ ನಡೆಯುವ ಕಟೀಲು ಮೇಳದ ಯಕ್ಷೋತ್ಸವದಲ್ಲಿ ಕೊನೆಯ ದಿನ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿ ಈ ಇಬ್ಬರು ಕಲಾವಿದರಿಗೆ ಬೊಂಡಾಲ ಪ್ರಶಸ್ತಿ ಪ್ರದಾನ ಮಾಡುವರು. ಕಟೀಲು ಕ್ಷೇತ್ರದ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ಮಾಜಿ ಸಚಿವ ಬಿ.ರಮಾನಾಥ ರೈ, ಬೊಂಡಾಲ ಚ್ಯಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಮೊದಲಾದ ಗಣ್ಯರು ಸಭೆಯಲ್ಲಿ ಭಾಗವಹಿಸುವರು.