ಬೆಳ್ತಂಗಡಿ: ಕ್ಷುಲ್ಲಕ ಕಾರಣವೊಂದಕ್ಕೆ ಕ್ರಿಮಿನಲ್ ಹಿನ್ನಲೆಯುಳ್ಳವರಿಬ್ಬರು ಸೇರಿ ಅಮಾಯಕ ಯುವಕನ ಮೇಲೆ ಮಾರಕಾಯುಧಗಳಿಂದ ಹಲ್ಲೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದಲ್ಲಿ ನಡೆದಿದೆ. ರೆಖ್ಯಾ ಗ್ರಾಮದ ಕೆಳೆಂಜಿನೋಡಿ ನಿವಾಸಿ ಗಿರೀಶ್ ಗೌಡ (25) ಹಲ್ಲೆಗೊಳಗಾದ ಯುವಕ. ಈ ಪ್ರಕರಣದ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಘಟನೆಯ ವಿವರ:
ರೆಖ್ಯಾ ಗ್ರಾಮದ ಕೆಡಂಬಲ ಸಮೀಪದ ಗುಂಡ್ಯ ಹೊಳೆಯಲ್ಲಿ ರೆಖ್ಯಾದ ಯುವಕರ ಗುಂಪೊಂದು ಸ್ನಾನ ಮಾಡುತ್ತಿದ್ದ ಸಮಯದಲ್ಲಿ ಸ್ಥಳಕ್ಕೆ ಆಗಮಿಸಿದ ರೆಖ್ಯಾ ಗ್ರಾಮದ ಕಟ್ಟೆ ನಿವಾಸಿಗಳಾದ ವಿಶ್ವನಾಥ ಕೆ.ಎಸ್ ಅಲಿಯಾಸ್ ಚಡ್ಡಿ ಬಾಲ ಮತ್ತು ರಮೇಶ್ ಆಚಾರಿ ಎಂಬವರು ಮದ್ಯ ಸೇವಿಸಿ ಏಕಾಏಕಿ ದಾಂಧಲೆ ಮಾಡಲು ಶುರುಮಾಡಿದ್ದರು. ಇವರನ್ನು ತಡೆಯಲು ಬಂದ ಗಿರೀಶ್ ಗೌಡ ಎಂಬವರ ಮೇಲೆ ಮಾರಕಾಯುಧಗಳಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ನೀಡಿರುವುದು ವರದಿಯಾಗಿದೆ. ಗಿರೀಶ್ ಗೆ ಗಂಭೀರ ಗಾಯಗಳಾಗಿದ್ದು, ಬೆಳ್ತಂಗಡಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ IPC ಸೆಕ್ಷನ್ 341,504,323,324,506,R/W34 IPC ಪ್ರಕರಣ ದಾಖಲಾಗಿದೆ.
ವಿಶ್ವನಾಥ ಕೆ.ಎಸ್ ಅಲಿಯಾಸ್ ಚಡ್ಡಿ ಬಾಲ ಮತ್ತು ರಮೇಶ್ ಆಚಾರಿ ಕ್ರಿಮಿನಲ್ ಹಿನ್ನಲೆ ಉಳ್ಳವರಾಗಿದ್ದು, ವಿಶ್ವನಾಥ ಕೆ.ಎಸ್ ವಿರುದ್ಧ ರಾತ್ರಿವೇಳೆ ವಾಹನಗಳಿಂದ ಡೀಸೆಲ್ ಕಳ್ಳತನ, ಯುವತಿಯ ಮಾನಭಂಗಕ್ಕೆ ಯತ್ನ ಕೇಸ್ ನಲ್ಲಿ 2 ಬಾರಿ ಜೈಲುವಾಸ ಅನುಭವಿಸಿದ್ದು ಜಾಮೀನು ಪಡೆದು ಬಿಡುಗಡೆಯಾಗಿದ್ದು, ತನ್ನ ಹಳೆ ಚಾಳಿ ಬಿಡದ ಈತ ಮನೆಯ ಹಿಂದಿರುವ ಶಾಲೆಯ ಪೀಠೋಪಕರಣ ಕಳವು, ಶಾಲೆಯ ಪಕ್ಕದಲ್ಲೇ ಇರುವ ಮರದ ಕೆಳಗೆ ಜೂಜಾಟ, ಪಕ್ಕದ ಮನೆಯ ಮೇಲೆ ಕಲ್ಲು ತೂರಾಟ ಹಾಗೂ ರಮೇಶ್ ಆಚಾರಿ ವಿರುದ್ಧ ಕಾಡು ಮರಗಳ ಕಳ್ಳ ಸಾಗಣೆ ಹೀಗೆ ನಾನಾ ಕ್ರಿಮಿನಲ್ ಕೇಸ್ ಗಳು ಇವರಿಬ್ಬರ ಮೇಲೆ ಹಿಂದೆಯೇ ದಾಖಲಾಗಿದ್ದು, ವಿಚಾರಣೆಗಳು ನಡೆಯುತ್ತಿದೆ.