ಬಂಟ್ವಾಳ: ಜಾಗತಿಕ ತಾಪಮಾನವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಅಗತ್ಯವಾಗಿದ್ದು, ಯುವಜನತೆಯನ್ನು ಇದಕ್ಕೆ ಸಜ್ಜುಗೊಳಿಸಬೇಕು ಎಂದು ಮಂಗಳೂರಿನ ಸರ್ಕಾರಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಜಯಕರ್ ಭಂಡಾರಿ ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜ್ ನಲ್ಲಿ ಇಂದು ಆಯೋಜಿಸಿದ್ದ ಒಂದು ದಿನದ ಸಸ್ಯಶಾಸ್ತ್ರ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನುದ್ದೇಶಿಸಿ ಹೇಳಿದರು.

ಮಾನವನ ದುರಾಸೆಗೆ ಅರಣ್ಯ ಸಂಪೂರ್ಣ ನಾಶವಾಗುತ್ತಿದ್ದು, 2020ರ ಹೊತ್ತಿಗೆ ಮನುಷ್ಯ ಜೀವಿಸಲು ಪರಿತಪಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ, ಯುವಪೀಳಿಗೆಗೆ ಇದರ ಗಂಭೀರತೆಯ ಅರಿವು ಮೂಡಿಸಲು ನಾವೆಲ್ಲರೂ ಶ್ರಮವಹಿಸಬೇಕಾಗಿದೆ. ಜಗತ್ತಿನ ಅತಿಸೂಕ್ಷ್ಮ ಜೀವ ವೈವಿಧ್ಯದ ಪ್ರದೇಶವಾದ ಪಶ್ಚಿಮ ಘಟ್ಟದಲ್ಲಿ 18000ಕ್ಕೂ ಅಧಿಕ ಜೀವ ಪ್ರಭೇದಗಳಿದ್ದು ಅವು ಕೂಡ ವಿನಾಶದಂಚಿನಲ್ಲಿವೆ. ಅಭಿವೃದ್ಧಿಯ ಹೆಸರಿನಲ್ಲಿ ಆಗುತ್ತಿರುವ ಈ ಪರಿಸರ ನಾಶಕ್ಕೆ ಸಂಪೂರ್ಣ ತಡೆವೊಡ್ಡುವ ಕಾರ್ಯ ಯುವಕರಿಂದಲೇ ಆಗಬೇಕು ಅಲ್ಲದೆ, ಈ ಪ್ರದೇಶದಲ್ಲಿ ವಿಶೇಷ ಔಷಧಿ ವನಸಂಪತ್ತಿದ್ದು, ಅದರ ಸಂರಕ್ಷಣೆ ಆಗಬೇಕಿದೆ ಎಂದರು. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೂಲ ವಿಜ್ಞಾನದ ಕಡೆಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದು, ವಿದ್ಯಾರ್ಥಿಗಳಲ್ಲಿನ ಈ ಬದಲಾವಣೆ ಹೆಚ್ಚು ವೈಜ್ಞಾನಿಕ ಮನೋಭಾವನೆ ಮೂಡಿಸುವಂತಾಗಲಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಪಾಂಡುರಂಗ ನಾಯಕ್ ಅವರು ಇಂದಿನ ದಿನಗಳಲ್ಲಿ ವಿಜ್ಞಾನ ಕ್ಷೇತ್ರದಲ್ಲಿನ ವಿವಿಧ ಅವಕಾಶಗಳನ್ನು ಉಪಯೋಗಿಸಿಕೊಂಡು ವಿದ್ಯಾರ್ಥಿಗಳು ಮೇಲ್ಮಟ್ಟಕ್ಕೆರಬೇಕಿದೆ, ಅಲ್ಲದೆ ಸ್ಥಳಿಯವಾಗಿ ಇರುವ ಹಲವು ಉಪಯುಕ್ತ ಸಸ್ಯ ಮೂಲಿಕೆಗಳ ವೈಜ್ಞಾನಿಕ ಅರಿವು ಪಡೆದು ಅವುಗಳ ಸಂರಕ್ಷಣೆ ಮಾಡಬೇಕಿದೆ ಹಾಗೂ ಸಸ್ಯಗಳ ಕುರಿತಾದ ವಿಶೇಷ ಸಂಶೋಧನೆ ಮತ್ತು ವಿಜ್ಞಾನ ಕ್ಷೇತ್ರದಲ್ಲಿನ ನವ ಆವಿಷ್ಕಾರಗಳಿಗೆ ವಿದ್ಯಾರ್ಥಿಗಳು ತಮ್ಮನ್ನು ಹೆಚ್ಚು ತೂಡಗಿಸಿಕೊಳ್ಳಬೇಕಿದೆ ಎಂದರು. ಕಾರ್ಯಕ್ರಮ ಸಂಯೋಜಕ ಡಾ| ವಿನಾಯಕ ಕೆ.ಎಸ್. ಅವರು ಕಾರ್ಯಾಗಾರ ಕುರಿತು ಪ್ರಸ್ತಾವಿಕ ನುಡಿಗಳನ್ನಾಡಿದರು. ಈ ಕಾರ್ಯಾಗಾರದಲ್ಲಿ ಶೃಂಗೇರಿಯ ಜೆ.ಸಿ.ಬಿ.ಎಮ್ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಸ್. ಕುಮಾರಸ್ವಾಮಿ ಉಡುಪ ಅವರು ಜೀವ ವೈವಿಧ್ಯತೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸುಪ್ರೀತ್ ಅವರು ಕಾರ್ಯಕ್ರಮ ವಂದಿಸಿ, ಸೆಲ್ವಿತ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ವಿಜ್ಞಾನ ವಿಭಾಗದ ಉಪನ್ಯಾಸಕರು, ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here