ಬಂಟ್ವಾಳ: ಕೊರೊನೊ ಸೋಂಕಿಗೆ ಸಂಬಂಧಿಸಿದಂತೆ ಮುಂಜಾಗ್ರತಾ ದೃಷ್ಟಿಯಿಂದ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಯಾವುದೇ ವ್ಯಕ್ತಿಗಳಲ್ಲಿ ರೋಗ ಲಕ್ಷಣಗಳು ಕಂಡು ಬಂದಲ್ಲಿ ಆರೋಗ್ಯ ಇಲಾಖೆಯನ್ನು ಸಂಪರ್ಕಿಸುವಂತೆ ತಾ. ಆರೋಗ್ಯ ಆಧಿಕಾರಿ ದೀಪಾ ಪ್ರಭು ಅವರು ಹೇಳಿದರು.
ಈ ಸೋಂಕು ಬಾಧಿತರಿಗೆ ನಿರ್ದಿಷ್ಟ ಚಿಕಿತ್ಸೆ ಕಂಡುಹಿಡಿಯಲಾಗಿಲ್ಲ, ರೋಗ ಲಕ್ಷಣಗಳಿಗನುಗುಣವಾಗಿ ಚಿಕಿತ್ಸೆ ನೀಡಲು ಅವಕಾಶವಿದೆ.
ಈವೆರೆಗೆ ಯಾವುದೇ ಪ್ರಕರಣ ಜಿಲ್ಲೆಯಲ್ಲಿ ಪತ್ತೆಯಾಗಿಲ್ಲ. ಇದು ಹೆಚ್ಚಾಗಿ ಪ್ರವಾಸಿಗರಿಂದ ಬರುವ ಸಾಧ್ಯತೆಗಳಿದ್ದು, ಏರ್ ಪೋರ್ಟ್ ಗಳಲ್ಲಿ ಹೆಚ್ಚಿನ ತನಿಖೆಗೆ ಒಳಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಅವರು ಎಸ್.ಜಿ.ಎಸ್.ವೈ.ಸಭಾಂಗಣದಲ್ಲಿ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೊರೊನೊ ಸೋಂಕು ಕುರಿತಾಗಿ ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಆಲಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿ ಬಳಿಕ ಸಂಪೂರ್ಣ ಮಾಹಿತಿ ನೀಡಿದರು.
ವಿದ್ಯಾರ್ಥಿಗಳಿಗೆ ಜಂತುಹುಳ ಮಾತ್ರೆಗಳನ್ನು ಎಲ್ಲಾ ಶಾಲೆಗಳಿಗೆ ನೀಡಲಾಗುತ್ತಿದ್ದು, ಖಾಸಗಿ ಶಾಲೆಗಳಲ್ಲಿ ಮಾತ್ರೆ ಪಡೆದುಕೊಳ್ಳಲು ನಿರಾಕರಣೆ ಮಾಡುತ್ತಿದ್ದಾರೆ, ಹಾಗಾಗಿ ಮಾತ್ರೆಗಳ ವಿತರಣೆಗೆ ಅಡ್ಡಿಯಾಗುತ್ತಿದ್ದು, ಶಿಕ್ಷಣ ಇಲಾಖಾ ಅಧಿಕಾರಿಗಳ ಸಹಕಾರ ಕೋರಿದರು. ಜೊತೆಗೆ ಪೋಷಕರಿಗೆ ಸರಿಯಾದ ಮಾಹಿತಿ ನೀಡಿ ಮನವೊಲಿಸಲು ಪ್ರಯತ್ನ ಮಾಡುವಂತೆ ಅವರು ತಿಳಿಸಿದರು.

ಬೋಳಂತೂರು ಆರೋಗ್ಯ ಉಪಕೇಂದ್ರವನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಿಂದ ಮಂಚಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾಯಿಸುವ ಪ್ರಕ್ರಿಯೆ ಶೀಘ್ರವಾಗಿ ನಡೆಸುವಂತೆ ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಆಲಿ ತಾ.ಆರೋಗ್ಯ ಅಧಿಕಾರಿ ದೀಪಾ ಪ್ರಭು ಅವರಿಗೆ ತಿಳಿಸಿದರು.
ಮಾರ್ಚ್, ಎಪ್ರಿಲ್ ತಿಂಗಳಿನಿಂದ ಕುಡಿಯುವ ನೀರಿನ ಸ್ಥಾವರಗಳಿಗೆ ಪವರ್ ಕಟ್ ಮಾಡದೆ ವಿದ್ಯುತ್ ಪೂರೈಕೆಗೆ ಬೇಕಾದ ವ್ಯವಸ್ಥೆಗಳನ್ನು ಈಗಿನಿಂದಲೇ ಪೂರ್ವ ತಯಾರಿ ಮಾಡಿಕೊಳ್ಳಿ, ಮೇ ತಿಂಗಳ ಕೊನೆಯ ಹಂತದಲ್ಲಿ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ತಲೆದೋರಬಾರದು ಎಂದು ಮೆಸ್ಕಾಂ ಇಲಾಖೆಯವರಿಗೆ ಸೂಚನೆ ನೀಡಿದರು.

ಫೆ. ಅಂತ್ಯದದೊಳಗೆ ಕಾಮಗಾರಿಗೆ ಸಂಬಂಧಿಸಿದ ಅನುದಾನಗಳನ್ನು ಬಳಕೆ ಮಾಡಿಕೊಂಡು ಹಣ ಖರ್ಚು ಮಾಡುವಂತೆ ಅಧಿಕಾರಿಗಳಿಗೆ ಇ.ಒ.ರಾಜಣ್ಣ ತಿಳಿಸಿದರು. ಕಾಮಗಾರಿ ನಡೆಸದೆ ಹಣ ವಾಪಾಸು ಹೋಗದಂತೆ ಕೆಲಸ ಮಾಡಿ ಎಂದು ಅವರು ಹೇಳಿದರು.

ಉನ್ನತೀಕರಿಸಿದ ನಾಲ್ಕು ಅಂಗನವಾಡಿ ಕಟ್ಟಡಗಳ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸಂಬಂಧಿಸಿದವರ ಮೇಲೆ ಒತ್ತಡ ಹೇರುವಂತೆ ಬಂಟ್ವಾಳ ಪ್ರಭಾರ ಸಿ.ಡಿ.ಪಿ.ಒ.ಗಾಯತ್ರಿ ಕಂಬಳಿ ತಾ.ಪಂ.ಇ.ಒ.ರಾಜಣ್ಣ ಅವರಲ್ಲಿ ವಿನಂತಿ ಮಾಡಿದರು.

ಆಂಗನವಾಡಿಗೆ ಸಂಬಂಧಿಸಿದ ಕಾಮಗಾರಿಗಳು ಸರಕಾರದ ಕ್ರಿಯಾಯೋಜನೆಗೆ ಸೀಮಿತವಾಗಿ ಮಾಡಿ ಎಂದು ತಾ.ಪಂ.ಇ.ಒ.ರಾಜಣ್ಣ ತಿಳಿಸಿದರು. ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಮತ್ತು ಹತ್ತು ಹೆಚ್.ಪಿ.ವರೆಗಿನ ಕೃಷಿ ಪಂಪ್ ಸೆಟ್ ಗಳ ಮನೆಯವರ ಅಗತ್ಯ ದಾಖಲೆಗಳನ್ನು ಇಂಧನ ಇಲಾಖೆಯ ವರು ನೀಡುವಂತೆ ಕೇಳಿದ ಹಿನ್ನೆಲೆಯಲ್ಲಿ ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳು ದಾಖಲೆಗಳನ್ನು ಪಡೆಯುತ್ತಿದ್ದಾರೆ, ಆದರೆ ಮೆಸ್ಕಾಂ ಇಲಾಖೆ ಯಾವುದೇ ಪೂರ್ವ ಮಾಹಿತಿ ನೀಡದೆ ಮೆಸ್ಕಾಂ ಸಿಬ್ಬಂದಿಗಳು ಮನೆಗಳಿಗೆ ಭೇಟಿ ನೀಡಿ ದಾಖಲೆಗಳನ್ನು ಕೇಳುವ ಸಂದರ್ಭದಲ್ಲಿ ಗೊಂದಲಗಳು ಉಂಟಾಗುತ್ತಿರುವ ಬಗ್ಗೆ ದೂರುಗಳು ಬಂದಿದೆ ಹಾಗಾಗಿ ಮುಂದಿನ ದಿನಗಳಲ್ಲಿ ಸರಿಯಾದ ಮಾಹಿತಿ ನೀಡಿ ಎಂದು ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು ಮೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು.
94 ಸಿ. ತಾ.ಪಂ.ಇಲಾಖೆಯ ಜಮೀನಿನ ಸರ್ವೇ ಕಾರ್ಯ ನಡೆದು ಒಂದು ತಿಂಗಳು ಅಗುತ್ತಾ ಬಂದರೂ ಕೂಡಾ ದಾಖಲೆಗಳನ್ನು ಇನ್ನು ನೀಡಿಲ್ಲ, ಕೂಡಲೇ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ತಯಾರಿಸಿ ನೀಡುವಂತೆ ತಿಳಿಸಿದರು.

ಎಲ್ಲಾ ಸರಕಾರಿ ಇಲಾಖೆಯ ಜಮೀನಿನ ಸರ್ವೇ ಕಾರ್ಯ ನಡೆಸಿ ಶೀಘ್ರವಾಗಿ ದಾಖಲೆಗಳನ್ನು ನೀಡುವಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಇ.ಒ.ತಿಳಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here